ಕೂಡ್ಲಿಗಿ ಪ.ಪಂ. -ಅರಳಿದ ಕಮಲ ಅಧ್ಯಕ್ಷರಾಗಿ ಎಂ. ಶಾರದಾಬಾಯಿ, ಉಪಾಧ್ಯಕ್ಷರಾಗಿ ಊರಮ್ಮ ಅವಿರೋಧ ಆಯ್ಕೆ.

ಕೂಡ್ಲಿಗಿ. ನ. 2:- ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧಿಕಾರ ಗದ್ದುಗೆ ಬಿಜೆಪಿ ಪಾಲಾಗಿದ್ದು ನೂತನ ಅಧ್ಯಕ್ಷರಾಗಿ 2ನೇ ವಾರ್ಡಿನ ಸದಸ್ಯೆ ಎಂ.ಶಾರದಾಬಾಯಿ ಮತ್ತು ಉಪಾಧ್ಯಕ್ಷರಾಗಿ 15 ನೇ ವಾರ್ಡಿನ ಸದಸ್ಯೆ ಊರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸರ್ಕಾರದ ಸುತ್ತೋಲೆಯಂತೆ ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ -ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಇಂದು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ಕೂಡ್ಲಿಗಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 10ಗಂಟೆಯಿಂದ 12ಗಂಟೆಯ ಸಮಯದಲ್ಲಿ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುದಾರರಾಗಲಿ ಅಥವಾ ಅವರ ಸೂಚಕರಾಗಲಿ ಸಹಿ ಮಾಡಿದ ನಾಮಪತ್ರಗಳನ್ನು ಸಲ್ಲಿಸುವ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ 2ನೇ ವಾರ್ಡಿನ ಸದಸ್ಯೆ ಎಂ.ಶಾರದಾಬಾಯಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಜೆಡಿಎಸ್ ನ ತಳಾಸ್ ವೆಂಕಟೇಶ್ ಸೂಚಕರಾದರೆ ಬಿಜೆಪಿಯ ಕೆ. ಎಚ್. ಎಂ ಸಚಿನ್ ಕುಮಾರ್ ಅನುಮೋದಕರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ 15ನೇ ವಾರ್ಡಿನ ಸದಸ್ಯೆ ಊರಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ವಾರ್ಡಿನ ಸದಸ್ಯ ಸೂಚಕರಾಗಿದ್ದರು. ಕೂಡ್ಲಿಗಿ ಪಟ್ಟಣ ಪಂಚಾಯತಿ 20ಸ್ಥಾನಗಳನ್ನೊಳಗೊಂಡಿದ್ದು ಅದರಲ್ಲಿ 1ನೇ ವಾರ್ಡಿನ ಪಕ್ಷೇತರ ಸದಸ್ಯ ಬಿ.ಎಂ. ತ್ರಿಮೂರ್ತಿ ಹಾಗೂ 12ನೇ ವಾರ್ಡಿನ ಬಿಜೆಪಿ ಸದಸ್ಯೆ ಬಿ. ಕೆ. ಜಯಮ್ಮ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದರಿಂದ ಈಗ 18ಸದಸ್ಯರಿದ್ದು ಅದರಲ್ಲಿ ಬಿಜೆಪಿಯಲ್ಲಿ 6ಸದಸ್ಯರು, ಕಾಂಗ್ರೆಸ್ ನಲ್ಲಿ 6ಸದಸ್ಯರು, ಜೆಡಿಎಸ್ ನಲ್ಲಿ 4ಸದಸ್ಯರು ಹಾಗೂ ಪಕ್ಷೇತರದಲ್ಲಿ 2ಸದಸ್ಯರಿದ್ದಾರೆ ಈಗಾಗಲೇ ಕೂಡ್ಲಿಗಿ ಶಾಸಕ ಎನ್. ವೈ. ಗೋಪಾಲಕೃಷ್ಣ ಬಿಜೆಪಿಯವರಿದ್ದು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಸಹ ಬಿಜೆಪಿಯವರಿದ್ದಾರೆ ಇವರ ಮತಗಳು ಸಹ ಕ್ಲಿಷ್ಟ ಸಂದರ್ಭದಲ್ಲಿ ಚಲಾಯಿಸಬಹುದಾಗಿದ್ದರು ಪ್ರತಿಷ್ಠೆಯ ಸಂದರ್ಭವಾಗಿದ್ದರಿಂದ ಕೂಡ್ಲಿಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಅಧಿಕಾರ ಗದ್ದುಗೆ ಹಿಡಿಯಲು ಕೂಡ್ಲಿಗಿ ಶಾಸಕರ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಮುಖಂಡರು ಪಟ್ಟಣ ಪಂಚಾಯತಿ ಬಿಜೆಪಿ ಸದಸ್ಯರು ಸೇರಿದ ಸಭೆಯ ತೀರ್ಮಾನದಂತೆ ಬಿಜೆಪಿ 6ಸದಸ್ಯರೊಂದಿಗೆ ಜೆಡಿಎಸ್ 4ಸದಸ್ಯರು ಹಾಗೂ ಪಕ್ಷೇತರದ ಇಬ್ಬರು ಸದಸ್ಯರ ಬೆಂಬಲದೊಂದಿಗೆ 12ಸದಸ್ಯರ ಬಲಾಬಲ ಹೊಂದಿದ ಬಿಜೆಪಿಯು ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರ ಹೊಂದಾಣಿಕೆ ಒಳಒಪ್ಪಂದದ ಆಧಾರದಲ್ಲಿ ಬಿಜೆಪಿ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದಲ್ಲಿ ಅಧಿಕಾರ ಗದ್ದುಗೆ ತನ್ನ ಪಾಲಾಗಿಸಿಕೊಂಡಿದ್ದು ಸ್ಥಾಯಿ ಸಮಿತಿ ಸ್ಥಾನ ಪಕ್ಷೇತರ ಅಥವಾ ಜೆಡಿಎಸ್ ಸದಸ್ಯರಿಗೆ ಬಿಟ್ಟುಕೊಟ್ಟಿದೆ. 6ಜನ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಯಾವುದೇ ಕೋರಂಗೆ ಬೆಂಬಲವಿಲ್ಲದೆ ತಟಸ್ಥ ನಿಲುವು ಕಂಡುಕೊಂಡಿತ್ತು.

ಬಿಜೆಪಿ ಪಕ್ಷದಿಂದ ವಿಪ್ ಜಾರಿ :ಬಿಜೆಪಿ ಪಕ್ಷದ 6ಸದಸ್ಯರಿಗೆ ನಿನ್ನೆ ಪಕ್ಷದವತಿಯಿಂದ ಬಿಜೆಪಿ ಪರ ಮತಚಲಾಯಿಸುವಂತೆ ವಿಪ್ ಜಾರಿಗೊಳಿಸಿದ ನೋಟೀಸನ್ನು ನಿನ್ನೆ ಬಿಜೆಪಿ ಸದಸ್ಯರಿಗೆ ನೀಡಲಾಗಿತ್ತು. ಆಯ್ಕೆ ಘೋಷಿಸಿದ ಚುನಾವಣಾಧಿಕಾರಿ : ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆಗೆ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ್ ಹಾಗೂ ಸಹಾಯಕರಾಗಿದ್ದ ಕೂಡ್ಲಿಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಫಕ್ರುದ್ದಿನ್ ಹಾಗೂ ತಾಲೂಕ ಕಚೇರಿ ಸಿಬ್ಬಂದಿಗಳು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ನಡೆದ ಚುನಾವಣಾ ಪ್ರಕ್ರಿಯೆ ಆಧಾರಿಸಿ ಅಧ್ಯಕ್ಷರಾಗಿ ಎಂ. ಶಾರದಾಬಾಯಿ ಹಾಗೂ ಉಪಾಧ್ಯಕ್ಷರಾಗಿ ಊರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರೆಂದು ಘೋಷಿಸಿದರು. ಕೂಡ್ಲಿಗಿ ಡಿ ವೈ ಎಸ್ ಪಿ ನೇತೃತ್ವದಲ್ಲಿ ಕೂಡ್ಲಿಗಿ ಸಿಪಿಐ ಕೂಡ್ಲಿಗಿ ಗುಡೇಕೋಟೆ, ಮರಿಯಮ್ಮನಹಳ್ಳಿ ಪಿಎಸ್ಐ ಗಳು ಹಾಗೂ ಸಿಬ್ಬಂದಿಗಳು ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಬಿಜೆಪಿಯಲ್ಲಿ ಹರ್ಷ :ಬಿಜೆಪಿ ಪಟ್ಟಣ ಪಂಚಾಯತಿ ಗದ್ದುಗೆ ಏರುತ್ತಿದ್ದಂತೆ ಬಿಜೆಪಿಯ ಮುಖಂಡರು, ಕಾರ್ಯಕರ್ತರಲ್ಲಿ ಹರ್ಷದ ಹೊನಲು ಹರಿದು ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಹೂ ಗುಚ್ಛ ನೀಡುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿಕೂಡ್ಲಿಗಿ ಶಾಸಕ ಎನ್. ವೈ. ಗೋಪಾಲಕೃಷ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕೂಡ್ಲಿಗಿ ಬಿಜೆಪಿ ಮಂಡಲ ಅಧ್ಯಕ್ಷ ಚನ್ನಪ್ಪ, ನಿಕಟಪೂರ್ವ ಅಧ್ಯಕ್ಷ ವೀರನಗೌಡ್ರು, , ಬಿ. ಭೀಮೇಶ, ದುರುಗೇಶ, ಮಂಜುನಾಥ, ಜೆಡಿಎಸ್ ತಾಲೂಕ ಅಧ್ಯಕ್ಷ, ತಾಲೂಕ ಪಂಚಾಯತಿ ಅಧ್ಯಕ್ಷೆ ನಾಗರತ್ನಮ್ಮ ಗುಪ್ಪಾಲ್ ಕಾರೆಪ್ಪ ಬಿಜೆಪಿ ತಾಲೂಕು ಮತ್ತು ನಗರ ಘಟಕದ ಬಿಜೆಪಿ ಪದಾಧಿಕಾರಿಗಳು ಮುಖಂಡರು ಹಾಗೂ ಜೆಡಿಎಸ್ ನ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು