
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.17 :- ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 245 ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ನಿನ್ನೆ ಮಧ್ಯಾಹ್ನ ತರಬೇತಿ ನೀಡಲಾಯಿತು.
22ಸೆಕ್ಟರ್ ಅಧಿಕಾರಿಗಳು ನಿನ್ನೆ ಮಧ್ಯಾಹ್ನ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ಮೊದಲ ತರಬೇತಿ ನೀಡಲು ಮುಂದಾಗಿದ್ದರು. ಮೇ 10ರಂದು ನಡೆಯುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತದಾನ ದಿನದಂದು ನಡೆಸಬಹುದಾದ ಎಲ್ಲಾ ನಮೂನೆಗಳ ಬಗ್ಗೆ ಮಾಹಿತಿ , ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಹಾಗೂ ಮತಯಂತ್ರಗಳ ಬಗ್ಗೆ ಸೆಕ್ಟರ್ ಅಧಿಕಾರಿಗಳು ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮೊದಲ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಈರಣ್ಣ ಬಿರಾದಾರ್, ಸಹಾಯಕ ಚುನಾವಣಾಧಿಕಾರಿ ಹಾಗೂ ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ್, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವೈ ರವಿಕುಮಾರ, ಚುನಾವಣಾ ಶಾಖೆಯ ಸಹಾಯಕ ಸಿಬ್ಬಂದಿಗಳಾದ ಈಶಪ್ಪ, ಶಿವಕುಮಾರ್, ವಾಸು ಸೇರಿದಂತೆ ಇತರಿದ್ದರು.
ತಾವೇ ನಿಂತು ಊಟ ಬಡಿಸಿದ ಚುನಾವಣಾಧಿಕಾರಿ : ಚುನಾವಣಾ ತರಬೇತಿ ಪಡೆಯಲು ಬಂದಿದ್ದ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮತ್ತು ಸೆಕ್ಟರ್ ಅಧಿಕಾರಿಗಳಿಗೆ ತಾವೇ ಮುಂದೆ ನಿಂದು ಮಧ್ಯಾಹ್ನದ ಸವಿಯೂಟವನ್ನು ಅವರ ತಟ್ಟೆಗಳಿಗೆ ಬಡಿಸುವ ಮೂಲಕ ಕೂಡ್ಲಿಗಿ ವಿಧಾನಸಭಾ ಚುನಾವಣಾಧಿಕಾರಿ ಈರಣ್ಣ ಬಿರಾದಾರ್, ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಟಿ ಜಗದೀಶ್, ಸ್ವೀಪ್ ತಾಲೂಕು ಸಮಿತಿ ಅಧ್ಯಕ್ಷ ವೈ ರವಿಕುಮಾರ, ಹಾಗೂ ಇತರೆ ಅಧಿಕಾರಿಗಳು ತರಬೇತಿದಾರರು ಹಾಗೂ ತರಬೇತಿ ಪಡೆಯಲು ಬಂದವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದರು.