ಕೂಡ್ಲಿಗಿ : ಪದವಿ ಕಾಲೇಜು ಪ್ರಾರಂಭ -ಕಾಲೇಜಿನತ್ತ ಸುಳಿಯದ ವಿದ್ಯಾರ್ಥಿಗಳು.

ಕೂಡ್ಲಿಗಿ.ನ.18:- ಸರ್ಕಾರದ ಸೂಚನೆಯಂತೆ ಪದವಿ ಕಾಲೇಜು ತರಗತಿ ಪ್ರಾರಂಭಿಸಲು ಪೂರ್ವತಯಾರಿ ಮಾಡಿಕೊಂಡು ಮಂಗಳವಾರ ಕೂಡ್ಲಿಗಿ ಎಸ್ ಎ ವಿ ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗದವರು ವಿದ್ಯಾರ್ಥಿಗಳ ಬರುವಿಕೆಗಾಗಿ ಕಾದು ಕುಳಿತರೆ ವಿದ್ಯಾರ್ಥಿಗಳು ಮಾತ್ರ ಕಾಲೇಜಿನ ಆವರಣಕ್ಕೂ ಸುಳಿಯದೆ ಇದ್ದದ್ದು ಕಂಡುಬಂದಿತು. ಸೋಮವಾರದಿಂದಲೇ ಕಾಲೇಜಿನ ಆವರಣ ಸ್ವಚ್ಛಗೊಳಿಸಿ ಪ್ರತಿಕೊಠಡಿಯಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿಗಳಿಂದ ಸ್ಯಾನಿಟೈಸರ್ ಮಾಡಿಸಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿ ಎಲ್ಲರ ವರದಿ ಸಹ ನೆಗೆಟಿವ್ ಬಂದಿದ್ದು ವಿದ್ಯಾರ್ಥಿಗಳು ಬಂದಲ್ಲಿ ಅವರ ಆರೋಗ್ಯದ ಹಿತದೃಷ್ಟಿಯಿಂದ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಕೋವಿಡ್ ಟೆಸ್ಟ್ ಮಾಡಲು ಮುಂದಾಗಿದ್ದರು ಮಂಗಳವಾರ ಮಾತ್ರ ಒಬ್ಬ ವಿದ್ಯಾರ್ಥಿ ಸಹ ಕಾಲೇಜಿನತ್ತ ಸುಳಿಯಲೇ ಇಲ್ಲಾ.
ಕಾಲೇಜಿನಲ್ಲಿ ಬಿ.ಎ, ಬಿಕಾಂ.ಸೇರಿದಂತೆ ಒಟ್ಟು 1172 ವಿದ್ಯಾರ್ಥಿಗಳಿದ್ದು ಒಬ್ಬ ವಿದ್ಯಾರ್ಥಿ ಸಹ ಮಂಗಳವಾರ ಕಾಲೇಜಿನ ಆವರಣ ಬಿಕೋ ಎನ್ನುತ್ತಿತ್ತು ಕಾಲೇಜ್ ಪ್ರಾರಂಭವಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಯಾವ ರೀತಿ ಕೈಗೊಳ್ಳಲಾಗಿದೆ ಎಂದು ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ವಿದ್ಯಾರ್ಥಿಗಳ ಪಾಲಕ ಪೋಷಕರಿಗೆ ಮಾಹಿತಿ ತಿಳಿಸುವಂತೆ ಹಾಗೂ ಅವರಿಂದ ಒಂದು ಮುಚ್ಚಳಿಕೆ ಬರೆಸಿಕೊಳ್ಳುವ ಕ್ರಮವನ್ನು ಪಾಲಿಸಿಕೊಳ್ಳುವಂತೆ ಹಾಗೂ ಆರೋಗ್ಯ ಇಲಾಖೆಯಿಂದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲು ತಾಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು. ಕೋವಿಡ್ ಟೆಸ್ಟ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕಾಲೇಜಿನ ಕೊಠಡಿಯೊಂದನ್ನು ಕೋವಿಡ್ -19 ಕೊಠಡಿ ಎಂದು ಮೀಸಲಿಡಲಾಗಿದ್ದು ಅದರಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಚೇತರಿಕೆಯಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಕಲ್ಲಪ್ಪ ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ ಕೋವಿಡ್ 19 ಎಸ್ ಓ ಪಿ (ಪ್ರಮಾಣಿತ ಕಾರ್ಯಾಚರಣೆ ವಿಧಾನ )ಮಾರ್ಗಸೂಚಿ ಅನ್ವಯ ಮಹಾವಿದ್ಯಾಲಯದಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಆಗಮನಕ್ಕೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾದು ಕುಳಿತಿದ್ದಾರೆ ಆದರೆ ವಿದ್ಯಾರ್ಥಿಗಳ ಮನಸ್ಸು ಕಾಲೇಜಿನತ್ತ ಮುಖಮಾಡಿಲ್ಲ ಎಂದೇ ಹೇಳಬಹುದಾಗಿದೆ.