ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆ ಮೂಲ ಸೌಲಭ್ಯಗಳ ಪ್ರಸ್ತಾಪ- ಸದಸ್ಯರಿಂದ ಮುಖ್ಯಾಧಿಕಾರಿಗೆ ತರಾಟೆ

ಕೂಡ್ಲಿಗಿ.ನ.20:- ಪಟ್ಟಣದಲ್ಲಿ ಬೀದಿದೀಪಗಳಿದ್ದರೂ ಉರಿಯುತ್ತಿಲ್ಲ, ಚರಂಡಿಯಿದ್ದರೂ ಸ್ವಚ್ಛತೆ ಇಲ್ಲ ಈಗ್ಗೆ ವರ್ಷದಿಂದ ಜನತೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಸಿ ಹೋಗಿದ್ದಾರೆ ಈಗ ನಾವು ಸದಸ್ಯರಾಗಿದ್ದು ನಮ್ಮನ್ನು ಜನತೆ ಶಪಿಸುತ್ತಾರೆ ಈ ಕೂಡಲೇ ಪಟ್ಟಣದಲ್ಲಿ ಮೂಲಭೂತ ಸೌಕರ್ಯ ನೀಡಬೇಕೆಂದು ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಈಶಪ್ಪ ಅವರು ಮುಖ್ಯಾಧಿಕಾರಿ ಫಕೃದ್ದೀನ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಅವರು ಗುರುವಾರ ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ನೂತನ ಅಧ್ಯಕ್ಷೆ ಎಂ.ಶಾರದಾಬಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಾಧಾರಣ ಸಭೆಯಲ್ಲಿ ಮಾತನಾಡುತ್ತಿದ್ದರು. ಕೂಡ್ಲಿಗಿ ಪಟ್ಟಣದಲ್ಲಿ ಅತೀ ಹೆಚ್ಚು ತೆರಿಗೆಯನ್ನು ವಿಧಿಸುತ್ತಿದ್ದು ಜನಸಾಮಾನ್ಯರು ರೋಸಿಹೋಗಿದ್ದಾರೆ. ಇಲ್ಲಿ ಬಹುತೇಕ ಬಡಜನತೆ ಇದ್ದು ಮನೆಯ ಕಂದಾಯ ಕಟ್ಟಲು ಬಂದರೂ ಅಧಿಕಾರಿಗಳು ಹಣ ಕಟ್ಟಿಸಿಕೊಳ್ಳಲಾಗದೇ ನಿರ್ಲಕ್ಷ್ಯವಹಿಸುತ್ತಿರುವುದು ಕಂಡು ಬಂದಿದೆ ಇಲ್ಲಿಯವರೆಗೂ ಪಟ್ಟಣ ಪಂಚಾಯ್ತಿಯ ಆಡಳಿತ ಇದ್ದಿಲ್ಲ ಈಗಾಗಿ ಅಧಿಕಾರಿಗಳೇ ಆಟ ಆಡಿದ್ದೀರಿ ಇನ್ನು ಮುಂದೆ ನಿಮ್ಮ ಆಟ ನಡೆಯುವುದಿಲ್ಲ ಎಂದು ತಿಳಿಸಿದರು. ಇದಕ್ಕೆ ಇನ್ನಿತರಾದ ಚಿರಿಬಿ ಮಂಜುನಾಥ, ಬಾಸುನಾಯ್ಕ ಸೇರಿದಂತೆ ಇತರೆ ಸದಸ್ಯರು ಧ್ವನಿಗೂಡಿಸಿದರು. ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯ್ತಿ ಆಡಳಿತ ಬಿಟ್ಟು ಹೊರಗಿನವರಿಗೆ ಮಣೆಹಾಕುತ್ತಿರುವುದು ಸರಿಯಾದ ಕ್ರಮವಲ್ಲ ಎಂದು 7ನೇ ವಾರ್ಡ್ ಸದಸ್ಯ ಕಾವಲ್ಲಿ ಶಿವಪ್ಪನಾಯಕ ಮುಖ್ಯಾಧಿಕಾರಿಗಳಿಗೆ ಎಚ್ಚರಿಸಿದರು. ನಮ್ಮ ವಾರ್ಡಿನಲ್ಲಿ ಶುದ್ದು ಕುಡಿಯುವ ನೀರಿನ ಸಮಸ್ಯೆ ಇದ್ದು ಕಿಲೋಮೀಟರ್ ಗಟ್ಟಲೇ ಕೂಡ್ಲಿಗಿಗೆ ಬಂದು ನೀರನ್ನು ತೆಗೆದುಕೊಂಡು ಹೋಗಬೇಕಿದೆ ಅಧಿಕಾರಿಗಳು ಶುದ್ದ ಕುಡಿಯುವ ನೀರಿನ ಘಟಕ ಉಪಯೋಗಕ್ಕೆ ಬರದಿದ್ದರೆ ಯಾಕೆ ಸ್ಥಾಪನೆ ಮಾಡಿದ್ದೀರಿ ಎಂದು 19ನೇ ವಾರ್ಡ್ ಸದಸ್ಯ ಪೂರ್ಯಾನಾಯ್ಕ ಮುಖ್ಯಾಧಿಕಾರಿಗಳಿಗೆ ಬೆವರು ಇಳಿಸಿದರು.
ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕುಃ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯಲ್ಲಿ ಇಲ್ಲಿಯವರೆಗೂ ಅವೈಜ್ಞಾನಿಕವಾಗಿ ತೆರಿಗೆಯನ್ನು ವಸೂಲಿ ಮಾಡಿದ್ದು ಬಡವ,ಬಲ್ಲಿದ ಎಂಬ ಬೇಧಭಾವವಿಲ್ಲದೇ ತೆರಿಗೆ ವಸೂಲಿ ಮಾಡುವುದು ಬೇಡ ಕೊಟ್ಟೂರು, ಹಗರಿಬೊಮ್ಮನಹಳ್ಳಿ ಸೇರಿದಂತೆ ಜಿಲ್ಲೆಯ ಇತರೆ ಪಟ್ಟಣ ಪಂಚಾಯ್ತಿ ಪುರಸಭೆಗಳಲ್ಲಿ ಯಾವರೀತಿ ತೆರಿಗೆ ಪದ್ದತಿ ಇದೆ ಅದನ್ನು ಮುಂದಿನ ಸಭೆಯಲ್ಲಿ ವರದಿ ನೀಡಿ ನಂತರ ನಮ್ಮ ಪಂಚಾಯ್ತಿಯ ತೆರಿಗೆಯನ್ನು ನಿರ್ಧರಿಸೋಣ ಹಾಗೂ ಪಟ್ಟಣದ ಕೆಲವು ರಸ್ತೆಗಳು ಒತ್ತುವರಿಯಾಗಿ ಮನೆಗಳು ಆಕ್ರಮಿಸಿದ್ದು ಅದನ್ನು ಸರಿಪಡಿಸಿ ರಸ್ತೆಯಲ್ಲಿ ಓಡಾಡಲು ಅನುವು ಮಾಡಬೇಕು ಎಂದು ಮುಖ್ಯಾಧಿಕಾರಿಗೆ ಪಟ್ಟಣ ಪಂಚಾಯ್ತಿ ಸದಸ್ಯ ತಳಾಸ ವೆಂಕಟೇಶ್ ಸಲಹೆ ನೀಡಿದರು.
ಮಹಿಳಾ ಸದಸ್ಯೆಯಿಂದ ಮಾತಿನ ಚಾಟಿಃ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸಾಮೂಹಿಕ ಮಹಿಳೆಯರ ಶೌಚಾಲಯ ನೀರು ಹಾಗೂ ಇತರೆ ಸೌಲಭ್ಯಗಳಿಲ್ಲದೇ ಮಹಿಳೆಯರು ಶೌಚಾಲಯಕ್ಕೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ, ಮಹಿಳೆಯರ ಶೌಚಾಲಯಕ್ಕೆ ಕುಡಿಯುವ ನೀರು ಸೇರಿದಂತೆ ಸ್ವಚ್ಛತೆ ಕಾಪಾಡುವುದು ಪಟ್ಟಣ ಪಂಚಾಯ್ತಿ ಕರ್ತವ್ಯವಾದರೂ ಇಲ್ಲಿಯವರೆಗೂ ಈ ಬಗ್ಗೆ ಗಮನಹರಿಸಿಲ್ಲ ಮಹಿಳೆಯರಿಗೆ ಪಟ್ಟಣದಲ್ಲಿ ಸೂಕ್ತ ಸೌಲಭ್ಯ,ರಕ್ಷಣೆ ಇಲ್ಲವಾದರೆ ಹೇಗೇ ಎಂದು 14ನೇ ವಾರ್ಡಿನ ರೇಣುಕಾ ಎಸ್.ದುರುಗೇಶ್ ಅವರು ಮುಖ್ಯಾಧಿಕಾರಿಗೆ ಮಾತಿನ ಚಾಟಿ ಬೀಸಿದರು. ಆದಷ್ಟು ಬೇಗನೆ ಶೌಚಾಲಯದಲ್ಲಿ ನೀರು ಸೇರಿದಂತೆ ಸೌಲಭ್ಯಗಳನ್ನು ಮಾಡುವುದಾಗಿ ಭರವಸೆ ನೀಡಿದರು. 3ನೇ ವಾರ್ಡಿನ ಸದಸ್ಯೆ ಲಕ್ಷ್ಮೀದೇವಿ ನಮ್ಮ ವಾರ್ಡಿನಲ್ಲಿ ನೀರಿನ ಟ್ಯಾಂಕ್ ಇದ್ದು ಮೂರ್ನಾಕು ವರ್ಷದಿಂದ ನೀರೇ ಬಂದಿಲ್ಲ ಎಂದು ಪ್ರಶ್ನಿಸಿದರು ಅದಕ್ಕೆ ಮುಖ್ಯಾಧಿಕಾರಿಗಳು ಎಲ್ಲಾ ಟ್ಯಾಂಕ್ ಗಳಲ್ಲಿ ನೀರು ಬರುತ್ತಿವೆ ಎಂದಾಗ ಬನ್ನಿ ನೀವು ನಾವು ತೋರಿಸುತ್ತೇವೆಂದು ಸದಸ್ಯೆ ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಎಂ.ಶಾರದಾಬಾಯಿ, ಉಪಾಧ್ಯಕ್ಷೆ ಊರಮ್ಮ, ಮುಖ್ಯಾಧಿಕಾರಿ ಫಕೃದ್ದೀನ್ ಹಾಗೂ ಸದಸ್ಯರಲ್ಲಿ ಇಬ್ಬರು ಗೈರಾಗಿದ್ದರು ಉಳಿದ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.