ಕೂಡ್ಲಿಗಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲು-ಸಚಿವ ಶ್ರೀರಾಮುಲು ಕರೆ

ಕೂಡ್ಲಿಗಿ.ನ.7:-ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧಿಕಾರ ಗದ್ದುಗೆ ಬಿಜೆಪಿ ಪಾಲಾಗಿದ್ದು ಸಂತಸವಾಗಿದೆ ಅದರಂತೆ ಪಟ್ಟಣದ ಅಭಿವೃದ್ಧಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರು ಶ್ರಮಿಸುವಂತೆ ರಾಜ್ಯದ ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಅವರು ಇಂದು ಮಧ್ಯಾಹ್ನ ಮೊಳಕಾಲ್ಮುರಿನಿಂದ ಹಾವೇರಿಗೆ ಕೂಡ್ಲಿಗಿ ಮೂಲಕ ಪ್ರಯಾಣ ಬೆಳೆಸುವಾಗ ಕೂಡ್ಲಿಗಿ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷೆ ಶಾರದಾಬಾಯಿ ಅವರ ಅಳಿಯ ಹಾಗೂ ಬಿಜೆಪಿ ಮುಖಂಡ ಬಿ.ಭೀಮೇಶ ಅವರ ಮನೆಗೆ ಭೇಟಿ ನೀಡಿ ಚಹಾಕೂಟದಲ್ಲಿ ಭಾಗವಹಿಸಿ ಮಾತನಾಡುತ್ತ ಕೂಡ್ಲಿಗಿ ಹಿಂದುಳಿದ ತಾಲೂಕಾಗಿದ್ದು ಆ ಹಣೆ ಪಟ್ಟಿ ತೆಗೆದುಹಾಕಲು ಈಗಿನ ಕ್ಷೇತ್ರದ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ರವರು ರಾಜಕೀಯ ಹಿರಿಯ ಮುತ್ಸದ್ದಿ ಹಾಗೂ ಅನುಭವಿ ರಾಜಕಾರಣಿಗಳಾಗಿದ್ದು ಕ್ಷೇತ್ರದ ಬಗ್ಗೆ ಅಪಾರ ಕಾಳಜಿಯಿಂದ ಕ್ಷೇತ್ರದ ಸಾವಿರಾರು ಗ್ರಾಮೀಣ ಭಾಗದ ಜನತೆಗೆ ಕುಡಿಯುವ ನೀರು ಯೋಜನೆ ಸೇರಿದಂತೆ ಅನೇಕ ಕಾಮಗಾರಿಗಳನ್ನು ಸರ್ಕಾರದಿಂದ ಅನುಮೋದನೆಗೊಳಿಸಿ ಹಣ ಬಿಡುಗಡೆಗೊಳಿಸುವ ಮೂಲಕ ಅಭಿವೃದ್ಧಿ ಹೆಜ್ಜೆ ಇಟ್ಟು ಕಾಮಗಾರಿಗಳನ್ನು ನಡೆಸುವ ಮೂಲಕ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ತೊಲಗಿಸುತ್ತಿದ್ದಾರೆ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುವಂತೆ ಸಚಿವ ಶ್ರೀರಾಮುಲು ಕಿವಿ ಮಾತು ಹೇಳಿದರು ಹಾಗೂ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಸಚಿವರು ಶುಭಹಾರೈಸಿದರು.
ಮತ್ತೋರ್ವ ಬಿಜೆಪಿ ಮುಖಂಡ ಕೋಡಿಹಳ್ಳಿ ಭೀಮಣ್ಣ ಮಾತನಾಡಿ ಪಟ್ಟಣ ಪಂಚಾಯತಿ ಅಧಿಕಾರ ಗದ್ದುಗೆ ಬಿಜೆಪಿ ಪಡೆದುಕೊಂಡಿದ್ದು ಅದಕ್ಕೆ ಬೆಂಬಲಿಸಿದ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರಿಗೂ ಅಭಿನಂದನೆ ತಿಳಿಸಿ ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಸೇರಿ ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾರದಾಬಾಯಿ, ಉಪಾಧ್ಯಕ್ಷೆ ಊರಮ್ಮ, ಬಿಜೆಪಿ ಸದಸ್ಯರಾದ ಸಚಿನ್ ಕುಮಾರ, ರೇಣುಕಾಶ್ರೀ ದುರುಗೇಶ, ಜೆಡಿಎಸ್ ನ ಸದಸ್ಯರಾದ ಈಶಪ್ಪ, ಸಿರಿಬಿ ಮಂಜುನಾಥ, ಪೂರ್ಯಾನಾಯ್ಕ್, ಪಕ್ಷೇತರ ಸದಸ್ಯ ಬಾಸುನಾಯ್ಕ್ ಸೇರಿದಂತೆ ಇತರಿದ್ದರು. ಎಲ್ಲರೂ ಸೇರಿ ಸಚಿವ ಶ್ರೀರಾಮುಲು ಅವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು ನಂತರ ಸಚಿವರು ಹಾವೇರಿಯತ್ತ ಪ್ರಯಾಣ ಬೆಳೆಸಿದರು