ಕೂಡ್ಲಿಗಿ ಪಟ್ಟಣದಲ್ಲಿ ಶೇ 100ರಷ್ಟು ಮತದಾನಕ್ಕೆ ಮನವಿ.ಸಖಿ, ಮಾದರಿ,ಯುವ,ವಿಶೇಷಮತಗಟ್ಟೆ ಅಲಂಕೃತ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ.9 :- ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸೇರುವ 26 ಮತಗಟ್ಟೆಗಳಲ್ಲಿ 9ಮತಗಟ್ಟೆಗಳನ್ನು ಎರಡು ಸಖಿ, ಎರಡು ಯುವ ಮತದಾರರ, ನಾಲ್ಕು ಮಾದರಿ, ಒಂದು ವಿಶೇಷ ವಿಕಲಚೇತನ ಮತಗಟ್ಟೆಗಳಾಗಿ ಗುರುತಿಸಿ ಅವುಗಳನ್ನು ವಿಶೇಷವಾಗಿ ಅಲಂಕೃತಗೊಳಿಸಲಾಗಿದೆ ಅಲ್ಲದೆ 26 ಮತಗಟ್ಟೆಯ ಮತದಾರರು ತಪ್ಪದೆ ಕಡ್ಡಾಯವಾಗಿ ಶೇ 100ರಷ್ಟು ಮತದಾನ ಮಾಡುವಂತೆ ಕೂಡ್ಲಿಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಪತ್ರಿಕಾ ಪ್ರಕಟಣೆ ಮೂಲಕ ಸಹ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಪಟ್ಟಣದ ವ್ಯಾಪ್ತಿಯಲ್ಲಿ ಸಿಬ್ಬಂದಿಯೊಂದಿಗೆ 20ವಾರ್ಡ್ ಗಳಲ್ಲಿ ಮನೆಮನೆಗೆ ತೆರಳಿ ಮತದಾರರ ಮನವೊಲಿಸಿ ಸಂವಿಧಾನಿಕ ಮತದಾನದ ಹಕ್ಕು ತಪ್ಪದೆ ಚಲಾಯಿಸಲು ತಿಳಿಸಿದ್ದು ಅಲ್ಲದೆ ಪಟ್ಟಣದ  52 ಹಾಗೂ 53 ಸಂಖ್ಯೆಯ ಮತಗಟ್ಟೆಗಳನ್ನು ಹೆಚ್ಚಾಗಿ ಮಹಿಳಾ ಮತದಾರರಿರುವ ಕಾರಣ ಸಖಿ ಮತಗಟ್ಟೆಗಳೆಂದು ಗುರುತಿಸಿ ಪಿಂಕ್ ಬಣ್ಣದಿಂದ ಅಲಂಕೃತಗೊಳಿಸಲಾಗಿದೆ ಅಲ್ಲದೆ ಇಲ್ಲಿನ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಇತರೆ ಸಿಬ್ಬಂದಿ ಮಹಿಳೆಯರೇ ಇರುವುದು ವಿಶೇಷವಾಗಿದೆ.
  ಪಟ್ಟಣದ ಕೆ ಕೆ ಹಟ್ಟಿಯ 45 ಮತ್ತು ಗೋವಿಂದಗಿರಿ ತಾಂಡಾದ  58 ಸಂಖ್ಯೆಯ  ಮತಗಟ್ಟೆಗಳನ್ನು ಯುವಮತದಾರರೇ ಹೆಚ್ಚಾಗಿರುವ ಕಾರಣ ಯುವಮತದಾರರ ಮತಗಟ್ಟೆಗಳಾಗಿ ಅಲಂಕೃತಗೊಳಿಸಲಾಗಿದೆ.ನಂತರವಾಗಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿರುವ 34, 35, 38ಹಾಗೂ 39ಸಂಖ್ಯೆ ಇರುವ ನಾಲ್ಕು ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳೆಂದು  ಗುರುತಿಸಿ ಅದನ್ನು ಸಹ ವಿಶೇಷವಾಗಿ ಅಲಂಕೃತಗೊಳಿಸಲಾಗಿದೆ.ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯ ಗೋವಿಂದಗಿರಿ ತಾಂಡಾದಲ್ಲಿ ಹೆಚ್ಚಾಗಿ ವಿಶೇಷ ವಿಕಲಚೇತನ ಮತದಾರರಿರುವುದರಿಂದ  2ನೇ ಕೊಠಡಿಯ 59ನೇ ಸಂಖ್ಯೆಯ ಮತಗಟ್ಟೆಯನ್ನು  ವಿಶೇಷ ವಿಕಲಚೇತನ ಮತಗಟ್ಟೆಯಾಗಿ ಗುರುತಿಸಿ ಇಲ್ಲಿಯೂ ಸಹ ವಿಶೇಷ ಚೇತನರಿರುವ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಈ ಮತಗಟ್ಟೆಯನ್ನು ಸಹ ಅಲಂಕೃತಗೊಳಿಸಿ ಮತದಾರರನ್ನು ಸೆಳೆದು ತಪ್ಪದೆ ಮತದಾನ ಮಾಡಲು ಸಜ್ಜುಗೊಳಿಸಲಾಗಿದೆ. ಮತದಾನಕ್ಕೆ ಕ್ಷಣಗಣನೆ ಇದ್ದು ಪಟ್ಟಣ ಪಂಚಾಯತಿ ವ್ಯಾಪ್ತಿಯ 26 ಮತಗಟ್ಟೆಯ ಮತದಾರರು ತಪ್ಪದೆ ಶೇ 100ರಷ್ಟು ಮತದಾನ ಮಾಡುವಂತೆ ಮತದಾರರಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಮನವಿ ಮಾಡಿದ್ದಾರೆ.