ಕೂಡ್ಲಿಗಿ ಪಟ್ಟಣಕ್ಕೆ ಡ್ಯಾಂ ನೀರು ಪೂರೈಕೆಯಾಗಲಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 11 :- ತುಂಗಭದ್ರಾ ಜಲಾಶಯದಿಂದ ಪಾವಗಡಕ್ಕೆ ಕುಡಿವ ನೀರು ಪೂರೈಸುವ ಯೋಜನೆಯಲ್ಲಿ ಕೂಡ್ಲಿಗಿ ಪಟ್ಟಣಕ್ಕೆ ಯೋಜನೆಯ ಪ್ರಯೋಜನೆಯಾಗಬೇಕು ಎಂದು ಯೋಜನೆಯ ಮುಖ್ಯಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಸೂಚಿಸಿದರು.
ಯೋಜನೆಯಲ್ಲಿ ಕೂಡ್ಲಿಗಿ ಪಟ್ಟಣದ ಪಕ್ಕದಲ್ಲೇ ಪೈಪ್ ಲೈನ್ ಹಾದು ಹೋಗಿದ್ದರೂ ಕೈ ಬಿಟ್ಟಿರುವುದು ತುಂಬಾ ತೊಂದರೆಯಾಗಲಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಹೇಳಿದ್ದರಿಂದ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಅಧಿಕಾರಿಗಳುಗೆ ತಾಕೀತು ಮಾಡಿದರು. ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿ ಕೂಡ್ಲಿಗಿ ಪಟ್ಟಣಕ್ಕೆ ಪಾವಗಡ ಯೋಜನೆಯಲ್ಲಿ ನೀರು ಪೂರೈಕೆಯಾಗಲು ಅವಕಾಶ ಮಾಡಿಕೊಡಲಾಗುವುದು ಎಂದು ಜಮೀರ್ ಅಹ್ಮದ್ ತಿಳಿಸಿದರು.
ಈ ಹಿಂದೆ ಕೂಡ್ಲಿಗಿ ಶಾಸಕರಾಗಿದ್ದ ಸಿರಾಜ್ ಶೇಕ್ ಮಾತನಾಡಿ ನಾನು ಕೂಡ್ಲಿಗಿ ಶಾಸಕನಾಗಿದ್ದ ಸಂದರ್ಭದಲ್ಲಿ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಹಾಗೂ ಕೊಟ್ಟೂರು ಪಟ್ಟಣಗಳಿಗೆ ತುಂಗಭದ್ರಾ ಡ್ಯಾಮ್ ನಿಂದ ಕುಡಿಯುವ ನೀರು ಸರಬರಾಜು ಮಾಡಲಾಗಿದ್ದು  ಅಂದಿನ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಕೆ ಮಾತ್ರ ಮಾಡಲಾಗಿತ್ತು ಆದರೆ ಇಂದು ಕೂಡ್ಲಿಗಿ ಪಟ್ಟಣದ ಜನಸಂಖ್ಯೆ ಹೆಚ್ಚಾಗಿದ್ದನ್ನರಿತು ಪಾವಗಡ ನೀರು ಪೂರೈಸುವ ಯೋಜನೆಯ ಪೈಪ್ ಲೈನ್ ಪಟ್ಟಣದ ಮೂಲಕ ಹಾದು ಹೋಗಿದ್ದರು ಪಟ್ಟಣಕ್ಕೆ ನೀರು ಪೂರೈಸಲು ಯೋಜನೆಯಲ್ಲಿ ಇಲ್ಲವಾಗಿದ್ದು ಇದನ್ನು ಯೋಜನೆಯಲ್ಲಿ ಅಳವಡಿಸಿ ಕೂಡ್ಲಿಗಿ ಪಟ್ಟಣಕ್ಕೂ ನೀರು ಪೂರೈಕೆಯಾಗಬೇಕು ಅಂದಾಗ ಸಚಿವ ಜಮೀರ್ ಹಾಗೂ ಕೂಡ್ಲಿಗಿ ಶಾಸಕರಾದ ಡಾ ಶ್ರೀನಿವಾಸ ಈ ವಿಷಯದ ಬಗ್ಗೆ ಸಿಎಂ ಜೊತೆ ಚರ್ಚಿಸಿ ಯೋಜನೆಯಲ್ಲಿ ಕೂಡ್ಲಿಗಿ ಪಟ್ಟಣದ ಹೆಸರು ಸೇರ್ಪಡೆ ಮಾಡುವ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವಾಕರ, ಸಿಇಓ ಸದಾಶಿವ, ಎಸ್ಪಿ ಶ್ರೀಹರಿಬಾಬು, ಕೂಡ್ಲಿಗಿ ತಹಸೀಲ್ದಾರ್ ಜಗದೀಶ್, ಇಓ ರವಿಕುಮಾರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.