ಕೂಡ್ಲಿಗಿ ದೇವದಾಸಿ ಸ್ವಾಲಂಬನಾ ಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗರಿ!

ಬಳ್ಳಾರಿ, ಅ.30-ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ದೇವದಾಸಿ ಸ್ವಾಲಂಬನಾ ಕೇಂದ್ರದ ಮೂಲಕ ಬದುಕು ಕಟ್ಟಿಕೊಂಡಿದ್ದ ಮಾಜಿ ದೇವದಾಸಿಯರ ಸ್ವಾಲಂಬನಾ ಕೇಂದ್ರಕ್ಕೆ ಈಗ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ!.
ಹೌದು ಚಿಕ್ಕಿಘಟಕದಿಂದ ಬದುಕು ರೂಪಿಸಿಕೊಂಡು ಸ್ವಾಲಂಬಿಗಳಾಗಿ ಜೀವನ ನಡೆಸುವ ಮೂಲಕ ಮಾದರಿಯಾಗಿರುವುದನ್ನು ಗುರುತಿಸಿರುವ ಸರಕಾರ ಮಾಜಿದೇವದಾಸಿಯರ ಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದರ ಮೂಲಕ ಅವರ ಕಾರ್ಯಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದೆ.
ಬಳ್ಳಾರಿ ಜಿಲ್ಲಾಡಳಿತವು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೈ ಹಾಕಿದ ವಿಶಿಷ್ಠ ಪ್ರಯತ್ನಕ್ಕೆ ಯಶಸ್ಸು ದೊರೆತಂತಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ ಅಭಿವೃದ್ಧಿ ನಿರೀಕ್ಷಕರ ಸಹಯೋಗದೊಂದಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ಕೂಡ್ಲಿಗಿ ಪಟ್ಟಣದ ಊರಮ್ಮ ದೇವಿ ದೇವಸ್ಥಾನದಲ್ಲಿ ಮಾಜಿ ದೇವದಾಸಿಯವರ ಪೈಕಿ ಅಣ್ಣಮ್ಮ ಸೇರಿದಂತೆ 15ಜನರನ್ನು ಗುರುತಿಸಿ, ಸ್ವಸಹಾಯ ಸಂಘ ರಚಿಸಿ ಇದಕ್ಕೆ ದೇವದಾಸಿ ಸ್ವಾಲಂಬನಾ ಕೇಂದ್ರವೆಂದು ಹೆಸರಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳಾ ಅಭಿವೃದ್ಧಿ ನಿಗಮದಿಂದ ಕಡಿಮೆ ಬಡ್ಡಿ ದರದಲ್ಲಿ 12ಲಕ್ಷ ರೂ.ಸಾಲ ಸೌಲಭ್ಯ ನೀಡಲಾಗಿದೆ. ಚಿಕ್ಕಿ ಘಟಕ ಆರಂಭಕ್ಕೂ ಮುನ್ನ ಸಂಘದ ಎಲ್ಲ ಸದಸ್ಯರಿಗೆ 15ದಿನ ತರಬೇತಿ ನೀಡಲಾಗಿತ್ತು.
ಈ ಮಾಜಿ ದೇವದಾಸಿಯರು ತಯಾರಿಸಿದ ಸೇಂಗಾ ಚಿಕ್ಕಿಗಳನ್ನು ಗರ್ಭೀಣಿಯರು-ಬಾಣಂತಿಯರು ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ವಿತರಿಸುವುದಕ್ಕಾಗಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಸೇಂಗಾ ಚಿಕ್ಕಿಗಳಿಗೆ ಸಂಬಂಧಿಸಿದ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದೇವದಾಸಿ ಸ್ವಾಲಂಬನಾ ಕೇಂದ್ರಕ್ಕೆ ನೀಡುತ್ತಿದೆ.
ಜಿಲ್ಲೆಯಲ್ಲಿ 10,540 ಮಾಜಿ ದೇವದಾಸಿಯರ ಪೈಕಿ ಕೂಡ್ಲಿಗಿಯಲ್ಲಿಯೇ ಇವರ ಸಂಖ್ಯೆ ಹೆಚ್ಚಿರುವುದರ ಹಿನ್ನೆಲೆ ಈ ಭಾಗದಲ್ಲಿ ಸೇಂಗಾ ಚಿಕ್ಕಿ ತಯಾರಿಕಾ ಘಟಕವನ್ನು ಬಳ್ಳಾರಿ ಜಿಲ್ಲಾಡಳಿತವು ಸ್ಥಾಪಿಸುವುದರ ಮೂಲಕ ಇವರಿಗೆ ಉದ್ಯೊಗ ಕಲ್ಪಿಸಿ ಸ್ವಾವಲಂಬಿ ಜೀವನಕ್ಕೆ ಸಹಕಾರಿ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಚಿಕ್ಕಿ ತಯಾರಿಕಾ ಘಟಕದಲ್ಲಿ ಯಂತ್ರಗಳನ್ನು ಅಳವಡಿಸುವ ಚಿಂತನೆಯಿದೆ.
ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಪೌಷ್ಟಿಕ ಆಹಾರ ಮೆನುದಲ್ಲಿ ಸೇಂಗಾ ಚಿಕ್ಕಿಯೂ ಒಂದಾಗಿದೆ.ಈಗಾಗಿಯೇ ಇವರು ತಯಾರಿಸುವ ಚೆಕ್ಕಿಗಳನ್ನು ಕೂಡ್ಲಿಗಿ ತಾಲೂಕಿನಲ್ಲಿ 300ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಲಾಗುತ್ತಿದೆ.ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಮಾಸಿಕ 7ಲಕ್ಷ ಚಿಕ್ಕಿ ಬೇಡಿಕೆಯಿರುವುದರಿಂದ ಪ್ರಾರಂಭಿಕ ಹಂತದಲ್ಲಿ ನಿತ್ಯ 4ಸಾವಿರ ಚಿಕ್ಕಿಗಳನ್ನು ತಯಾರಿಸುವಲ್ಲಿ ಮಾಜಿ ದೇವದಾಸಿಯರು ನಿರತರಾಗಿದ್ದಾರೆ.


ಮುಂದಿನ ದಿನಗಳಲ್ಲಿ ಉದ್ಯೊಗಿನಿ ಯೋಜನೆಯಡಿ ಇನ್ನು ಹೆಚ್ಚಿನ ಸಾಲ ಸೌಲಭ್ಯ ಒದಗಿಸಿ ಘಟಕಕ್ಕೆ ಚಿಕ್ಕಿ ತಯಾರಿಸುವ ಯಂತ್ರಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.ಅದರ ಜತೆ ಮಾಜಿ ಇನ್ನು ಹೆಚ್ಚಿನ ಮಟ್ಟದಲ್ಲಿ ಮಾಜಿ ದೇವದಾಸಿಯರಿಗೆ ತರಬೇತಿ ನೀಡಿ, ಚೆಕ್ಕಿ ಘಟಕದಲ್ಲಿ ಕೆಲಸ ನೀಡಲಾಗುತ್ತದೆ. ಮಾಜಿ ದೇವದಾಸಿಯರನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಆರ್ಥಿಕವಾಗಿ ಸಬಲರನ್ನಾಗಿಸಬೇಕೆಂಬುದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಕನಸಾಗಿದೆ. ಅವರ ನೇತೃತ್ವದಲ್ಲಿ ಕೂಡ್ಲಿಗಿಯಲ್ಲಿ ಚೆಕ್ಕಿ ಘಟಕ ಆರಂಭವಾಗಿದ್ದು, ಈ ಘಟಕ ನಡೆಸುತ್ತಿರುವ ದೇವದಾಸಿ ಸ್ವಾಲಂಬನಾ ಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಸಂತಸ ತಂದಿದೆ
ನಾಗರಾಜ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಮಾಜಿ ದೇವದಾಸಿಯರು ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳಲಿ ಎಂಬ ಸದುದ್ದೇಶದಿಂದ ಅವರಿಗೆ ತರಬೇತಿ ನೀಡಿ ಕೂಡ್ಲಿಗಿಯಲ್ಲಿ ಚೆಕ್ಕಿ ಘಟಕ ಆರಂಭಿಸಿ ಅನುಕೂಲ ಮಾಡಿಕೊಡಲಾಗಿತ್ತು; ಅವರ ಸ್ವಾಲಂಬನಾ ಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ
ಎಸ್.ಎಸ್.ನಕುಲ್ ಬಳ್ಳಾರಿ ಜಿಲ್ಲಾಧಿಕಾರಿ

ರಾಮಲಿಂಗಪ್ಪ ಬಿ.ಕೆ
ಹಿರಿಯ ಸಹಾಯಕ ನಿರ್ದೇಶಕರು
ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ
ಬಳ್ಳಾರಿ