ಕೂಡ್ಲಿಗಿ ತಾಲೂಕಿನ ಮೂರು ಕಡೆ ಮೊಹರಂ ನಿಷೇಧ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ. 5 :- ತಾಲೂಕಿನ ಮೂರು ಗ್ರಾಮಗಳಲ್ಲಿ ನಡೆದ ಎರಡು ಗುಂಪಿನ ಜಗಳಗಳಿಂದ ಹಾಗೂ ರಾಜಕೀಯ ವೈಷಮ್ಯದಿಂದ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನಾಧರಿಸಿ ವಿಜಯನಗರ ಜಿಲ್ಲಾಧಿಕಾರಿ ಮೊಹರಂ ಹಬ್ಬ ಆಚರಿಸದಂತೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಐಗಳಮಲ್ಲಾಪುರ, ಹಿರೇಕುಂಬಳಗುಂಟೆ ಹಾಗೂ ಟಿ ಕಲ್ಲಹಳ್ಳಿ ಗ್ರಾಮಗಳಲ್ಲಿ ಮೊಹರಂ ಹಬ್ಬ ಆಚರಣೆ ನಿಷೇಧವಾಗಿದೆ.
ಐಗಳ ಮಲ್ಲಾಪುರ :- ಪ್ರಸಕ್ತ ಸಾಲಿನಲ್ಲಿ ಮಡಿವಾಳ ಹಾಗೂ ವಾಲ್ಮೀಕಿ ಸಮುದಾಯದ ನಡುವೆ ಜಗಳವಾಗಿದ್ದು ಮೊಹರಂ ಹಬ್ಬದ ಆಚರಣೆ ಮಾಡುವುದರಿಂದ ಸಾರ್ವಜನಿಕರ ನೆಮ್ಮದಿಗೆ ಭಂಗವಾಗಬಹುದು ಎಂದು ಅರಿತು ಮೊಹರಂ ನಿಷೇಧಿಸಲಾಗಿದೆ.
ಹಿರೇಕುಂಬಳಗುಂಟೆ  :- ಗ್ರಾಮದಲ್ಲಿ 2021 ನೇ ಸಾಲಿನಲ್ಲಿ ಮೊಹರಂ ಹಬ್ಬ ಆಚರಣೆಯನ್ನು ಮಾಡುವ ಸಲುವಾಗಿ ಗ್ರಾಮದ ಎರಡು ಗುಂಪುಗಳ ನಡುವೆ ನಡೆದ ವಿವಾದವು ಹೊಸಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿಸುವ್ಯವಸ್ಥೆ ಕಾಪಾಡುವಲ್ಲಿ ಈ ಗ್ರಾಮದಲ್ಲಿ ಮೊಹರಂ ಆಚರಿಸದಂತೆ ನಿಷೇಧಿಸಲಾಗಿದೆ.
ಟಿ ಕಲ್ಲಹಳ್ಳಿ :- 2018 ನೇ ಸಾಲಿನಲ್ಲಿ ಕಲ್ಲಹಳ್ಳಿ ಗ್ರಾಮದ ದಲಿತಕೇರಿಯ ಕೊಲ್ಲಾರಮ್ಮ ದೇವಿಯ ದಸರಾ ಹಬ್ಬದ ಪೂಜೆಯ ಸಲುವಾಗಿ ದಲಿತ ಜನಾಂಗ ಮತ್ತು ಇತರೆ ಜನಾಂಗದ ನಡುವೆ ಗಲಾಟೆಯಾಗಿ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ಹಾಗೂ ಗ್ರಾಮದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಲ್ಲಿ ಈ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ನಿಷೇಧಿಸಲಾಗಿದೆ.
ಈ ಗ್ರಾಮಗಳ ಮಾಹಿತಿ ಪಡೆದುಕೊಂಡ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಕೂಡ್ಲಿಗಿ ತಾಲೂಕಿನ ಮೂರುಗ್ರಾಮಗಳಲ್ಲಿ ಮೊಹರಂ ಆಚರಿಸದಂತೆ ನಿಷೇಧಿಸಿ ಆದೇಶ ಹೊರಡಿಸಿದ್ದು ಆದೇ ರೀತಿ ಕೂಡ್ಲಿಗಿ ಪೊಲೀಸ್ ಠಾಣಾ ಸರಹದ್ದಿನ ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದಲ್ಲಿ 1994ರಲ್ಲಿ ನಡೆದ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಪ್ರಯುಕ್ತ ಗಲಾಟೆ ವಗೈರಾಗಳು ನಡೆದು ರಾಜಕೀಯ ದ್ವೇಷ ಮತ್ತು ಪಕ್ಷಪಂಗಡಗಳ ನಡುವೆ ಅಸೂಯೆ ಮನೆಮಾಡಿರುವ ದೃಷ್ಟಿಯಿಂದ 1994 ರಿಂದಲೂ ಮೊಹರಂ ಹಬ್ಬ ನಿಷೇಧಿಸಿದ್ದು ಇದನ್ನೇ ಮುಂದುವರೆಸಿ ಕೂಡ್ಲಿಗಿ ಠಾಣಾ ಸರಹದ್ದಿನ ಹನಸಿ ಗ್ರಾಮದಲ್ಲೂ ಮೊಹರಂ ಆಚರಣೆಯನ್ನು ನಿಷೇಧಿಸಿ ವಿಜಯನಗರ  ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.