ಕೂಡ್ಲಿಗಿ ತಾಲೂಕಿನ ಡಾ.ಮರುಳಸಿದ್ಧಯ್ಯ ಸಮಾಜಶಾಸ್ತ್ರದ ಮೇರುವ್ಯಕ್ತಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 30 :- ತಾಲೂಕಿನ ಗಡಿಭಾಗದ ಕುಗ್ರಾಮ ಹಿರೇಕುಂಬಳಗುಂಟೆ ಎಂಬ ಹಳ್ಳಿಯಲ್ಲಿ ಸ್ವಸ್ಥಿ  ಸಂಸ್ಥೆಯನ್ನು ಸ್ಥಾಪಿಸಿ  ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ  ಸಮಾಜಕ್ಕೆ ಏಳ್ಗೆಗೆ ಶ್ರಮಿಸಿದ ಡಾ ಎಚ್ ಎಂ ಮರಳುಸಿದ್ದಯ್ಯ  ಸಮಾಜಶಾಸ್ತ್ರದ ಪಿತಾಮಹ ಎಂದೇ ಹೇಳಬಹುದು ಹಾಗೂ ಸಮಾಜಕ್ಕೆ ಅವರು ಕೊಟ್ಟ ಕೊಡುಗೆ ಅಪಾರವಾದುದಾಗಿದೆ ಎಂದು ನಿವೃತ್ತ ಉಪನ್ಯಾಸಕ ಎಚ್.ವಸಂತ ಸಜ್ಜನ್ ತಿಳಿಸಿದರು.
ಅವರು ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದ ಪುಸ್ತಕ ಮನೆಯಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಎಚ್.ಎಂ.ಮರುಳಸಿದ್ಧಯ್ಯನವರ 92 ನೇ ವರ್ಷದ ಜನ್ಮದಿನದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ  ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟು ತಾಲೂಕಿನ ಗಡಿ ಭಾಗದಲ್ಲಿರುವ ಹಿರೇಕುಂಬಳಗುಂಟೆಯನ್ನು ದೇಶ, ವಿದೇಶಿಗರಿಗೆ ಪರಿಚಯಿಸಿದ ಕೀರ್ತಿ ಡಾ ಮರುಳಸಿದ್ಧಯ್ಯನವರಿಗೆ ಸಲ್ಲುತ್ತದೆ ಎಂದರು.
ಪತ್ರಕರ್ತ ಎಸ್.ಎಂ.ಗುರುಪ್ರಸಾದ್ ಮಾತನಾಡಿ, ತಾವು ಹುಟ್ಟಿ ಬೆಳೆದ ಮನೆಯನ್ನು ಪ್ರತಿಯೊಬ್ಬರಿಗೂ ಜ್ಙಾನ ಸಿಗಲೆಂಬ ಮಹದಾಸೆಯಿಂದ ಪುಸ್ತಕ ಮನೆಯನ್ನಾಗಿಸಿ ಶಿಕ್ಷಣ ಇಲಾಖೆಗೆ ದಾನ ನೀಡಿದಂಥ ಮರುಳಸಿದ್ಧಯ್ಯನವರ ವ್ಯಕ್ತಿತ್ವ ಹಾಗೂ ನಡೆ, ನುಡಿಗಳು ಎಲ್ಲರಿಗೂ ಆದರ್ಶವಾಗಿವೆ ಎಂದರು.
ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಜೆ.ಎಂ.ಧನಂಜಯ,
ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಪ್ರತಿಭಾ ಉಮೇಶ್, ಯುವ ಮುಖಂಡ ಜಿ.ಎಂ.ನಾಗರಾಜ ಗೌಡ ಮಾತನಾಡಿದರು. ಸ್ವಸ್ಥಿ ಸಂಸ್ಥೆಯ ಮುಖ್ಯಸ್ಥ ಎಚ್.ಬಿ.ಕಣ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಿ.ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಶ್ಯಾಮಸುಂದರ್ ಸಫಾರೆ ದಂಪತಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎಂ.ಕರಿಯಣ್ಣ ಗೌಡ, ಎಚ್.ಎಂ.ಗುರುಬಸವರಾಜ್, ಎಚ್.ಎಂ.ಉಮೇಶ್, ಎಚ್.ಎಂ.ಮಹೇಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.