ಕೂಡ್ಲಿಗಿ ತಾಲೂಕಿನಲ್ಲಿ ಸಿಡಿಲಿನ ಆರ್ಭಟ. ಗ್ರಾ ಪಂ ಸದಸ್ಯ ಸೇರಿ ಜಾನುವಾರುಗಳು ಬಲಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 22 :- ನಿನ್ನೆ ಸಂಜೆಯಿಂದ ತಾಲೂಕಿನ ಗುಡೇಕೋಟೆ ಹಾಗೂ ಹೊಸಹಳ್ಳಿ ಹೋಬಳಿಯಲ್ಲಿ ಗುಡುಗು ಸಹಿತ ಮಳೆಯ ಸಿಡಿಲಿನ ಆರ್ಭಟಕ್ಕೆ ಅಪ್ಪೇನಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಸೇರಿದಂತೆ ಒಂದು ಆಕಳು, ಎತ್ತು, ಕರು, ಎರಡು ಕುರಿಗಳು ಬಲಿಯಾದ ಘಟನೆ ಜರುಗಿದೆ.
ತಾಲೂಕಿನ ಗುಡೇಕೋಟೆ ಹೋಬಳಿಯ ಗಡಿಗ್ರಾಮವಾದ ಡಿ. ಸಿದ್ದಾಪುರ ಗ್ರಾಮದ ಮಲ್ಲಿಕಾರ್ಜುನ (40) ಇವರು ಹಾಲಿ ಅಪ್ಪೇನಹಳ್ಳಿ ಗ್ರಾಮಪಂಚಾಯಿತಿ ಸದಸ್ಯರಾಗಿದ್ದು ಇವರು ತಮ್ಮ ಜಮೀನಿನಲ್ಲಿ ಕಳೆದ ಸಂಜೆ 4ಗಂಟೆ ಸುಮಾರಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿರುವಾಗ್ಗೆ ಆಕಸ್ಮಿಕ ಆರ್ಭಟಿಸಿದ ಸಿಡಿಲು ಮಲ್ಲಿಕಾರ್ಜುನ ಅವರಿಗೆ ಬಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎರಡು ಕುರಿ ಬಲಿ : ಅದೇ ರೀತಿಯಾಗಿ ಗುಡೇಕೋಟೆ ಹೋಬಳಿಯ ದೇವರಹಟ್ಟಿಯಲ್ಲಿ ಕಳೆದ ಸಂಜೆ 7ಗಂಟೆ ಸುಮಾರಿಗೆ ದೇವರಹಟ್ಟಿ ಚಂದ್ರಪ್ಪನಿಗೆ ಸೇರಿದ ಎರಡು ಕುರಿಗಳು ಸಿಡಿಲಿನ ಆರ್ಭಟಕ್ಕೆ ಬಲಿಯಾಗಿವೆ.
ಒಂದು ಆಕಳು, ಎತ್ತು ಬಲಿ : ಹೊಸಹಳ್ಳಿ ಹೋಬಳಿಯ ನಡುವಲಹಟ್ಟಿಯ ಕೃಷ್ಣಪ್ಪ ಎನ್ನುವ ರೈತನಿಗೆ ಸೇರಿದ ಒಂದು ಆಕಳು ಹಾಗೂ ಒಂದು ಎತ್ತು ಕಳೆದ ಸಂಜೆ 6-30 ಗಂಟೆಗೆ ಬಡಿದ ಸಿಡಿಲಿನ ಆರ್ಭಟಕ್ಕೆ ಬಲಿಯಾಗಿದೆ.
 ಹೋರಿಕರು ಸಾವು :
ಹೊಸಹಳ್ಳಿ ಹೋಬಳಿಯ ಸುಟ್ಟಕರ್ನಾರಹಟ್ಟಿಯ ತಿಪ್ಪಮ್ಮ ಎನ್ನುವವರಿಗೆ ಸೇರಿದ ಒಂದು ಹೋರಿಕರುವಿಗೆ ಇಂದು ನಸುಕಿನ ಜಾವ ಬಡಿದ ಸಿಡಿಲಿನ ಆರ್ಭಟಕ್ಕೆ ಬಲಿಯಾಗಿದೆ.
ಅಧಿಕಾರಿಗಳು ಭೇಟಿ : ಈ ಘಟನೆ ಜರುಗಿದ ಸ್ಥಳಗಳಿಗೆ ಕಂದಾಯ ಇಲಾಖೆಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದಿದೆ.
ತಾಲೂಕಿನಲ್ಲಿ ಮಳೆ ಪ್ರಮಾಣ : ನಿನ್ನೆ ತಾಲೂಕಿನಲ್ಲಿ ಸುರಿದ ಗುಡುಗು ಸಹಿತ ಮಳೆ ಪ್ರಮಾಣ ಇಂತಿದೆ. ಕೂಡ್ಲಿಗಿ : 9.8ಮಿ ಮೀ. ಗುಡೇಕೋಟೆ : 2.3ಮಿ ಮೀ. ಚಿಕ್ಕಜೋಗಿಹಳ್ಳಿ : 1.4ಮಿ ಮೀ ನಷ್ಟು ಮಳೆಯಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.