ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 26 :- ತಾಲೂಕಿನ ವಿವಿಧ ಕಡೆ ಭಾನುವಾರ ಸುರಿದ ಮಳೆಯಿಂದ ರೈತರು ಸಂತಸಗೊಂಡಿದ್ದು ಬಿತ್ತನೆ ಮಾಡಿದ್ದ ಫಸಲುಗಳಿಗೆ ಜೀವದಾನ ಬಂದಂತಾಗಿದೆ ನಿನ್ನೆ ಸುರಿದ ಮಳೆಯಿಂದ ಯಾವುದೇ ಅನಾಹುತವಾಗಿಲ್ಲವೆಂದು ತಿಳಿದಿದೆ.
ಜೋಳ ಬಿತ್ತನೆ ಮಾಡಿದ ನಂತರ ಮಳೆ ಬಾರದ ಹಿನ್ನೆಲೆ ರೈತರು ಕಂಗಾಲಾಗಿದ್ದರು. ಆದರೆ, ಕೂಡ್ಲಿಗಿ, ಗುಡೇಕೋಟೆ ಕಾನಹೊಸಹಳ್ಳಿ, ಸೇರಿ ತಾಲೂಕಿನ ಬಹುತೇಕ ಕಡೆ ಸತತ ಎರಡು ತಾಸುಗಳ ಕಾಲ ಮಳೆ ಸುರಿದಿರುವುದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ರೋಹಿಣಿ ಮಳೆಗೆ ಜೋಳ ಬಿತ್ತನೆ ಮಾಡಿದ್ದ ರೈತರು ಮಳೆ ಕೈಕೊಟ್ಟಿದ್ದರಿಂದ ಮುಗಿಲಿನತ್ತ ಮುಖ ಮಾಡಿದ್ದರು. ಅಲ್ಲದೆ, ಮೆಕ್ಕೆಜೋಳ, ರಾಗಿ, ಶೇಂಗಾ ಬಿತ್ತನೆ ಮಾಡುವ ರೈತರು ವರುಣನ ಕೃಪೆಗಾಗಿ ಕಾದು ಕುಳಿತಿದ್ದರು. ಆದರೆ, ಈಗ ಉತ್ತಮವಾಗಿ ಮಳೆ ಸುರಿದಿರುವುದು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ ಆದರೆ, ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಪೂಜಾರಹಳ್ಳಿ, ತಿಪ್ಪೇಹಳ್ಳಿ, ಹುಡೇಂ, ತಾಯಕನಹಳ್ಳಿ, ಜುಮ್ಮೋಬನಹಳ್ಳಿ ಸೇರಿ ನಾನಾ ಕಡೆ ವರುಣನ ಅವಕೃಪೆ ಕಾಡುತ್ತಿದ್ದು, ಶೇಂಗಾ ಸೇರಿ ನಾನಾ ಬೀಜಗಳ ಬಿತ್ತನೆಗೆ ಜಮೀನು ಹಸನು ಮಾಡಲು ರೈತರು ಕಾಯುವಂಥ ಸ್ಥಿತಿ ಎದುರಾಗಿದರುವುದು ಆತಂಕ ಮೂಡಿಸಿದೆ.
ಕೂಡ್ಲಿಗಿ ತಾಲೂಕಿನ ಮಳೆ ಪ್ರಮಾಣ ಇಂತಿದೆ : ಕೂಡ್ಲಿಗಿಯಲ್ಲಿ 22 ಮಿ ಮೀನಷ್ಟು ಮಳೆಯಾಗಿದ್ದು ಇದರಂತೆ ಗುಡೇಕೋಟೆ 32 ಮಿ ಮೀ ನಷ್ಟು, ಹೊಸಹಳ್ಳಿಯಲ್ಲಿ 8 ಮಿ ಮೀ ನಷ್ಟು, ಚಿಕ್ಕಜೋಗಿಹಳ್ಳಿಯಲ್ಲಿ 7.2 ಮಿ ಮೀ ನಷ್ಟು ಹಾಗೂ ಬಣವಿಕಲ್ಲು ಬರೀ 2.4 ಮಿ ಮೀ ನಷ್ಟು ಮಾತ್ರ ಮಳೆಯಾಗಿದ್ದು ತಾಲೂಕಿನಲ್ಲಿ ಸುರಿದ ಮಳೆಯಿಂದ ಯಾವುದೇ ಅನಾಹುತವಾಗಿಲ್ಲವೆಂದು ಕಂದಾಯ ಇಲಾಖೆ ಮಾಹಿತಿಯಿಂದ ತಿಳಿದಿದೆ.