ಕೂಡ್ಲಿಗಿ ತಾಲೂಕಿನಲ್ಲಿ ನಾಗರ ಪಂಚಮಿ ಹಬ್ಬಜೋರು. 


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಆ. 3 :- ಸೋಮವಾರ ಮತ್ತು ಮಂಗಳವಾರ ನಾಗರ ಚೌತಿ ಪಂಚಮಿ ದಿನಗಳಂದು  ತಾಲೂಕಿನಲ್ಲೆಡೆ ಹಬ್ಬದ ಸಡಗರ  ಸಂಭ್ರಮ ಮನೆ ಮಾಡಿತ್ತು.
ಕೂಡ್ಲಿಗಿ ತಾಲೂಕಿನಲ್ಲಿ ಕುಟುಂಬ ಸಮೇತರಾಗಿ ದೇವಸ್ಥಾನದಲ್ಲಿರುವ ನಾಗರ ಮೂರ್ತಿಗಳಿಗೆ ಹಾಗೂ ಹುತ್ತಗಳತ್ತ ತೆರಳಿ ಮಡಿ ಮೈಲಿಗೆಯಲ್ಲಿ ಉಪವಾಸ ವ್ರತದಲ್ಲಿ ನವಜೋಡಿಗಳು ಸೇರಿದಂತೆ ಪುರುಷರು,ಮಹಿಳೆಯರು, ಮಕ್ಕಳಾಧಿಯಾಗಿ ಹಬ್ಬದ ಪೂಜಾ ಕಾರ್ಯದಲ್ಲಿ ತೊಡಗಿ ಹಾಲೆರೆದರು.
ತಾಲೂಕಿನ  ಗ್ರಾಮೀಣ ಪ್ರದೇಶದಲ್ಲಿ ಈ ಹಬ್ಬವನ್ನು  ತಿಂಗಳ ಹಬ್ಬವನ್ನಾಗಿ ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯದಂತೆ ಚೌತಿ, ಪಂಚಮಿ, ಎರಡನೇ ಸೋಮವಾರ, ಕೊನೆ ಸೋಮವಾರ ಎಂಬಾಧಿಯಾಗಿ   ಮನೆ-ಮನೆಗಳಲ್ಲಿ ಹಬ್ಬದ  ದಿನ ಬೆಳಗ್ಗೆಯಿಂದ ತರಹದ  ಹಬ್ಬದ ಅಡುಗೆಯ ಸಿದ್ಧತೆ ಮಾಡಿಕೊಂಡು  ಮನೆಯ ಯಜಮಾನರು ಸೇರಿದಂತೆ ಮುತ್ತೈದೆಯರು ಮಕ್ಕಳೊಂದಿಗೆ ಹೊಸ ಬಟ್ಟೆ ತೊಟ್ಟು, ನಾಗದೇವತೆ ದೇವಸ್ಥಾನ, ಕಲ್ಲುನಾಗರಮೂರ್ತಿ, ಹುತ್ತಗಳಿರುವ ಪ್ರದೇಶಗಳಿಗೆ ತೆರಳಿ ಕುಟುಂಬದ ಎಲ್ಲರಿಗೂ ಒಳ್ಳೆಯದಾಗಲೆಂದು ಬೇಡಿಕೊಳ್ಳುತ್ತಾ ದೇವರಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು ಅಲ್ಲದೆ ಪಂಚಮಿ ವಿಶೇಷವಾಗಿ ಲಡ್ಡುoಡಿ  ತಯಾರಿಸಲಾಗಿ ಅದರಲ್ಲಿ ಪ್ರಮುಖವಾಗಿ ಕಡ್ಲಿ, ಪುಟಾಣಿ, ಗೋಧಿ, ಶೇಂಗಾ, ಹೆಸರು, ತೆಂಬಿಟ್ಟು, ರವೆ, ಎಳ್ಳು, ಅಳ್ಳಿಟ್ಟು, ಹೀಗೆ ನಾನಾ ತರಹದ ಉಂಡಿಗಳು ತಯಾರಿಸಿ ನೈವೇದ್ಯ ಮಾಡಿ ಮತ್ತು ಸಂಬಂಧಿಕರಿಗೆ ಉಂಡೆಗಳನ್ನು ಕಲಿಸುವಲ್ಲಿ ಮುಂದಾಗಿದ್ದ ವಾತಾವರಣ ಕಂಡುಬಂದಿತ್ತು.
ಜೋಕಾಲಿ ಆಟ ಜೋರು :-

ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಮಕ್ಕಳು ಜೋಕಾಲಿ ಆಡಿ ಸಂಭ್ರಮಿಸುವುದರ ಜತೆಗೆ ಒಣಕೊಬ್ಬರಿ ಬಟ್ಟಲುಗಳಲ್ಲಿ ದಾರ ಕಟ್ಟಿಕೊಂಡು ಬುಗರಿಯಂತೆ ತಿರುಗಿಸಿ ಆಟವಾಡಿದರು. ನೂಲು ತುಂಡಾದ ಬಳಿಕ ಒಣಕೊಬ್ಬರಿ ತಿಂದು ಸಂತೋಷಪಟ್ಟರು. ಶ್ರಾವಣ ಮಾಸ ಹಾಗೂ ಪಂಚಮಿ ಹಿನ್ನೆಲೆಯಲ್ಲಿ ವಿವಿಧ ದೇವಸ್ಥಾನಗಳಿಗೆ ಭಕ್ತರು ತೆರಳಿ ದೇವರ ದರ್ಶನ ಪಡೆದು ಪುನಿತಾರಾದ್ರು.
ಇನ್ನು ಚಿಕ್ಕ ಮಕ್ಕಳು ಮನೆಗಳಲ್ಲಿ ಕಟ್ಟಿದ ಜೋಕಾಲಿ ಆಡಿದರೆ, ಹಿರಿಯರು ದೊಡ್ಡ ಮರಗಳಿಗೆ ಕಟ್ಟಿದ ಜೋಕಾಲಿ ಜೀಕಿ ಖುಷಿಪಟ್ಟರು. ಗ್ರಾಮೀಣ ಮಹಿಳೆಯರೂ ಜೋಕಾಲಿ ಆಡಿದ್ದು ಅಲ್ಲಲ್ಲಿ ಕಂಡುಬಂದಿತು. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಸಂಭ್ರಮದಿಂದ ತವರು ಮನೆಗೆ ಆಗಮಿಸಿ ಹಬ್ಬದ  ಸಂಭ್ರಮದಲ್ಲಿ ತೊಡಗಿದ್ದರು.

Attachments area