ಕೂಡ್ಲಿಗಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸಲು ಶ್ರಮಿಸುವೆ- ಎನ್.ವೈ.ಗೋಪಾಲಕೃಷ್ಣ.

ಕೂಡ್ಲಿಗಿ.ನ.21:- ಕೂಡ್ಲಿಗಿ ತಾಲೂಕನ್ನು ಶತಾಯ ಗತಾಯ ಪ್ರಯತ್ನಮಾಡಿ ತಾಲೂಕಿನ ಜನತೆಯ ಅಭಿಪ್ರಾಯದಂತೆ ವಿಜಯನಗರ ಜಿಲ್ಲೆಗೆ ಸೇರಿಸಲು ಶ್ರಮಿಸುವೆ ಎಂದು ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ತಾಲೂಕಿನ ಜನತೆಗೆ ಭರವಸೆ ನೀಡಿದರು.
ಅವರು ಶುಕ್ರವಾರ ತಾಲೂಕಿನ ಕಾನಾಮಡಗು ದಾಸೋಹಮಠದಲ್ಲಿ ಆಯೋಜಿಸಿದ್ದ ವಿಜಯನಗರ ಜಿಲ್ಲೆಗೆ ಕೂಡ್ಲಿಗಿ ತಾಲೂಕನ್ನು ಸೇರಿಸುವ ಕುರಿತ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಂಡು ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡುವಂತೆ ಒತ್ತಾಯ ಮಾಡಿದ್ದೆ, ಬಾನುವಾರ ಹೊಸಪೇಟೆಗೆ ಸಮೀಪದ ವೈಕುಂಠ ಅತಿಥಿಗೃಹಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಬರಲಿದ್ದಾರೆ ಅಲ್ಲಿಗೆ ಸಂಸದ ದೇವೇಂದ್ರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪಿ.ಚನ್ನಬಸವನಗೌಡ್ರು ಹಾಗೂ ಸ್ಥಳೀಯ ಕೂಡ್ಲಿಗಿ ತಾಲೂಕಿನ ಮುಖಂಡರ ಜೊತೆ ಮಾಧುಸ್ವಾಮಿ ಹಾಗೂ ಸಚಿವ ಆನಂದ್ ಸಿಂಗ್ ಅವರನ್ನು ಬೇಟಿ ಮಾಡಿ ನೂತನ ವಿಜಯನಗರ ಜಿಲ್ಲೆಗೆ ಕೂಡ್ಲಿಗಿಯನ್ನು ಉಳಿಸುವಂತೆ ತಿಳಿಸಲಾಗುವುದು ಅದಕ್ಕೆ ಸೂಕ್ತ ಕಾರಣಗಳನ್ನು ಸಹ ಅವರಿಗೆ ನೀಡಲಾಗುವುದು ಎಂದರು. ಜನರಿಗೆ ವಿಜಯನಗರ ಜಿಲ್ಲೆಗೆ ಹೋಗಿಬರಲು ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ಅನುಕೂಲವಾಗಲಿದ್ದು ಹಾಗೂ ಬಳ್ಳಾರಿ ಬಹಳ ದೂರವಾಗುವುದರಿಂದ ಅನಾನುಕೂಲವಾಗುವುದರ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಬಳ್ಳಾರಿ ಜಿಲ್ಲಾ ಎಸ್.ಟಿ.ಮೋರ್ಚಾ ಬಿಜೆಪಿ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ ಕೂಡ್ಲಿಗಿ ತಾಲೂಕನ್ನು ಸಚಿವ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ಪಡೆದ ವಿಜಯನಗರ ಜಿಲ್ಲೆಗೆ ಸೇರಿಸುವುದು ವೈಜ್ಞಾನಿಕವಾಗಿಯೂ ಹಾಗೂ ಭೌಗೋಳಿಕವಾಗಿಯೂ ಸೂಕ್ತವಾಗಿದ್ದು ಅವೈಜ್ಞಾನಿಕವಾಗಿ ಜಿಲ್ಲೆಯನ್ನು ಮಾಡುವುದು ಖಂಡನೀಯ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಕೂಡ್ಲಿಗಿ ಶಾಸಕರ,ಸಂಸದರ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರ ಸಮಕ್ಷಮದಲ್ಲಿ ವಿವರವಾಗಿ ತಿಳಿಸುವ ಮೂಲಕ ಕೂಡ್ಲಿಗಿ ಸೇರಿಸಲು ತಾಲೂಕಿನ ಎಲ್ಲಾ ಮುಖಂಡರು ಸೇರಿ ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾನಾಮಡಗು ದಾಸೋಹಮಠದ ಐಮಡಿ ಶರಣಾರ್ಯರು, ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಪಿ.ಚನ್ನಬಸವನಗೌಡ್ರು, ಬಿಜೆಪಿ ಯುವ ಮುಖಂಡರಾದ ಭೀಮೇಶ್, ಕೆ.ಬಿ.ಮಂಜುನಾಥ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ, ತಾ.ಪಂ. ಸದಸ್ಯ ಹುಡೇಂ ಪಾಪಾನಾಯಕ, ತಾಲೂಕು ಬಿಜೆಪಿ ಅಧ್ಯಕ್ಷ ಚನ್ನಪ್ಪ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಹಾಜರಿದ್ದರು.