
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ.7 :- ಕ್ಷೇತ್ರದಲ್ಲಿ ಕಳೆದ ಬಾರಿ ಪಕ್ಷದ ಪ್ರತಿಯೊಬ್ಬ ಮತದಾರರು ಹಿತೈಷಿಗಳು, ಕಾರ್ಯಕರ್ತರು ಶ್ರಮಿಸಿ ಕಮಲ ಅರಳಿಸಿ ಕ್ಷೇತ್ರದ ಅಭಿವೃದ್ಧಿ ಕಂಡಂತೆ ಈ ಬಾರಿಯೂ ಬಿಜೆಪಿಗೆ ಮತನೀಡಿ ನಿಮ್ಮ ಮನೆಮಗನನ್ನು ಗೆಲ್ಲಿಸಿದರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಕ್ಷೇತ್ರದ ಸೇವಕನಾಗಿ ಶ್ರಮಿಸುವೆ ಎಂದು ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ತಮ್ಮ ಮನಸಿನ ಭಾವನೆಯನ್ನು ಜನರಲ್ಲಿ ಹಂಚಿಕೊಂಡರು.
ಅವರು ಕ್ಷೇತ್ರದಲ್ಲಿ ನಿನ್ನೆ ಉಜ್ಜಿನಿ ಬೆನಕನಹಳ್ಳಿ, ಬೈರದೇವರಗುಡ್ಡ, ಬೆಳದೇರಿ, ತೂಲಹಳ್ಳಿ ಹಾಗೂ ಇಂದು ಬೆಳಿಗ್ಗೆ ರಾಮದುರ್ಗ, ಚಂದ್ರಶೇಖರಪುರ, ಕುದುರೆಡವು, ಗೊಲ್ಲರಹಟ್ಟಿ, ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತ ಬಿಜೆಪಿ ಸರ್ಕಾರ ಕೂಡ್ಲಿಗಿ ಕ್ಷೇತ್ರದಲ್ಲಿ ರೈತರ ಶಾಶ್ವತ ಪರಿಹಾರ ಯೋಜನೆಯಾದ ತಾಲೂಕಿನ 76ಕೆರೆಗಳಿಗೆ ನೀರುತುಂಬಿಸುವ ಯೋಜನೆಗೆ ನೂರಾರು ಕೋಟಿ ಅನುದಾನ ನೀಡಿದೆ ಅಲ್ಲದೆ ರಸ್ತೆ, ಶಾಲಾ ಕಟ್ಟಡ, ವೈದ್ಯರ ಹಾಗೂ ಸಿಬ್ಬಂದಿಗಳ ವಸತಿ ಗೃಹಗಳ ನಿರ್ಮಾಣ, ಪಟ್ಟಣದಲ್ಲಿರುವ ಎಪಿಎಂಸಿ ಅಭಿವೃದ್ಧಿ, ನೂತನ ಪಟ್ಟಣ ಪಂಚಾಯತಿ ಕಟ್ಟಡ, ಜನರ ಬಹುದಿನಗಳ ಕನಸಾಗಿದ್ದ ತಾಲೂಕು ಆಡಳಿತ ಸೌಧ (ಮಿನಿ ವಿಧಾನಸೌಧ )ನಿರ್ಮಾಣ ಕಂಡಂತೆ 217ಗ್ರಾಮಗಳಿಗೆ ತುಂಗಭದ್ರಾ ನೀರು ಪೂರೈಕೆ ಯೋಜನೆಗೆ ಅನುದಾನ, ಎಲ್ಲದಕ್ಕೂ ಮುಖ್ಯವಾಗಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಅಸ್ತು ಎಂದಿದ್ದು ಅಲ್ಲದೆ ಕ್ಷೇತ್ರದಲ್ಲಿ ಇನ್ನು ಅನೇಕ ಅನುದಾನ ನೀಡುವ ಮೂಲಕ ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಜನರ ಕಣ್ಣ ಮುಂದೆ ಸಾಕ್ಷಿಯಾಗಿದೆ ಅದೇ ರೀತಿಯಾಗಿ ಮುಂದಿನ ಕ್ಷೇತ್ರದ ಉಜ್ವಲ ಭವಿಷ್ಯ ಉತ್ತಮವಾಗಿಸಲು ಕ್ಷೇತ್ರದಲ್ಲಿರುವ ನಿರುದ್ಯೋಗ ಸಮಸ್ಯೆಗೆ ಅಂತ್ಯ ಹಾಡಲು ಗುಳೇ ತಪ್ಪಿಸಿ ಕ್ಷೇತ್ರದಲ್ಲೇ ಉದ್ಯೋಗ ಸೃಷ್ಟಿಸುವ ಕಾರ್ಯ ನನ್ನ ಕನಸಾಗಿದ್ದು ಉಜ್ವಲ ಭವಿಷ್ಯಕ್ಕೆ ಉತ್ತಮ ಸರ್ಕಾರವಾದ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರ ತರಲು ಹಾಗೂ ಕ್ಷೇತ್ರದಲ್ಲಿ ಇನ್ನಷ್ಟು ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಿಮ್ಮಅಮೂಲ್ಯವಾದ ಮತ ಬಿಜೆಪಿಗೆ ನೀಡಿ ಆಶೀರ್ವದಿಸಿದರೆ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಆರಳುವ ಮೂಲಕ ಕ್ಷೇತ್ರದಲ್ಲಿ ನಿಮ್ಮ ಈ ಮನೆಮಗ ಲೋಕೇಶ ನಾಯಕ ನಿಮ್ಮ ಸೇವಕನಂತೆ ಕೆಲಸ ಮಾಡಿ ತೋರಿಸುವೆ ಎಂದು ಅಭ್ಯರ್ಥಿ ಲೋಕೇಶ ನಾಯಕ ಮನದಾಳದ ಮಾತನ್ನು ತಿಳಿಸಿದರು.
ಉಜ್ಜಿನಿ ಹಾಗೂ ತೂಲಹಳ್ಳಿ ಭಾಗದ ಪ್ರಚಾರ ಕಾರ್ಯದಲ್ಲಿ ಗುಳಿಗಿ ವೀರೇಂದ್ರ, ಹಾಗೂ ಇತರರು ಭಾಗವಹಿಸಿ ಮತಯಾಚನೆ ನಡೆಸಿದರು. ಇಂದು ರಾಮದುರ್ಗ, ಚಂದ್ರಶೇಖರಪುರ, ಕುದುರೆಡವು, ಗೊಲ್ಲರಹಟ್ಟಿ ಹಾಗೂ ನಾಗರಹುಣಿಸೆ ಗ್ರಾಮದಲ್ಲಿ ಮನೆಮನೆಗೆ ತೆರಳಿ ಹಾಗೂ ರೋಡ್ ಶೋ ಮೂಲಕ ನಡೆಸಲಾದ ಬಿಜೆಪಿ ಮತ ಯಾಚನೆ ಕಾರ್ಯದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಸೂರ್ಯಪಾಪಣ್ಣ, ಗುಡೇಕೋಟೆ ರಾಜಣ್ಣ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಪ್ರಾಣೇಶರಾವ್ , ಚಂದ್ರಶೇಖರಪುರದ ಶರಣನಗೌಡ, ಪ್ರಹ್ಲಾದ, ನರಸಿಂಹಗಿರಿ ಈರಣ್ಣ, ಮಲ್ಲಿಕಾರ್ಜುನ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇಂದು ನಡೆದ ಬಿಜೆಪಿ ಪ್ರಚಾರ ಕಾರ್ಯದಲ್ಲಿ ತೊಡಗಿ ಮತಯಾಚನೆ ಮಾಡಿದರು.