ಕೂಡ್ಲಿಗಿ ಕ್ಷೇತ್ರದಲ್ಲಿ ಸಮಗ್ರ ನೀರಾವರಿ ಯೋಜನೆಯಾಗಿಲ್ಲ – ಜಿಂಕಲ್ ನಾಗಮಣಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ. 14 :-  ಸದಾ ಕೂಲಿ ಹರಸಿ ಗುಳೇ ಹೋಗುವ ಬರದ ನಾಡಾದ  ಕೂಡ್ಲಿಗಿ ಕ್ಷೇತ್ರದಲ್ಲಿ ನೀರಾವರಿ ಯೋಜನೆಯ ಅವಶ್ಯಕತೆ ಇದ್ದು  ಅದು  ಕ್ಷೇತ್ರದಲ್ಲಿ  ಸಮಗ್ರವಾಗಿಲ್ಲವೆಂದು  ಕೆಪಿಸಿಸಿ ಸದಸ್ಯೆ, ರಾಜ್ಯ ಮಹಿಳಾ ಕಾಂಗ್ರೇಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮುಂಬರುವ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ  ಕಾಂಗ್ರೇಸ್ ಟಿಕೇಟ್ ನ ಪ್ರಬಲ ಮಹಿಳಾ ಆಕಾಂಕ್ಷಿ ಜಿಂಕಲ್ ನಾಗಮಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಹಿಳಾ ಶಕ್ತಿ ದೇಶದ ಶಕ್ತಿ ಎಂಬ ನಿಟ್ಟಿನ ಮಹಿಳೆಯರ ಸಬಲೀಕರಣ, ನಾಯಕತ್ವ ಗುಣವೃದ್ದಿ, ಭಾವನೆಗಳಿಗೆ ಸ್ಪಂದನೆ, ಸಂಕಷ್ಟಕ್ಕೆ ಸಂಕಲ್ಪ ಕುರಿತಾದ  ‘ನಾ.. ನಾಯಕಿ ಕಾರ್ಯಕ್ರಮದ  ಬಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಕಾಂಗ್ರೇಸ್ ನಲ್ಲಿ ಮಹಿಳೆಯರಿಗೆ 50% ಮೀಸಲು ನೀಡುವ ಬಗ್ಗೆ ನಾ ನಾಯಕಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ಈ ರೀತಿಯ ಹೈಕಮಾಂಡ್ ತೀರ್ಮಾನದಂತೆ  ಕೂಡ್ಲಿಗಿ ಕ್ಷೇತ್ರದಲ್ಲಿ ರಾಜಕೀಯ ಕುಟುಂಬದಿಂದ ಬಂದ ಮಹಿಳೆಯಾದ ನನಗೆ ಈ ಬಾರಿ ಟಿಕೆಟ್ ನೀಡುವಂತೆ ಹೈಕಮಾಂಡ್ ಗೆ ಮನವಿ ಮಾಡುತ್ತೇನೆ ಎಂದರು.
ಸತತ ಎರಡು ಭಾರಿ ಕೂಡ್ಲಿಗಿ ವಿಧಾನಸಭಾ ಟಿಕೇಟ್ ಹಾಗೂ ಒಂದು ಬಾರಿ ಬಳ್ಳಾರಿ ಲೋಕಸಭಾ ಟಿಕೇಟ್ ಕೊನೆ ಘಳಿಗೆಯಲ್ಲಿ ತಪ್ಪಿರುವುದಾಗಿ ತಿಳಿಸಿದ ನಾಗಮಣಿ ಕಾಂಗ್ರೇಸ್ ಪಕ್ಷಕ್ಕೆ ಎರಡು  ದಶಕದಿಂದ ಸಕ್ರಿಯ ಕಾರ್ಯಕರ್ತಳಂತೆ ಕೆಲಸ ಮಾಡಿದ್ದೇನೆ . ಕೂಡ್ಲಿಗಿ ಪಟ್ಟಣದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ತೆರೆದು ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ, ದೌರ್ಜನ್ಯ ಮಹಿಳೆಯರಿಗೆ ಸಾಂತ್ವನ ನೀಡಲು ಮಹಿಳಾ ಸಹಾಯವಾಣಿ ಮೂಲಕ ಶುಭೋದಯ ಎಂಬ ಸಂಸ್ಥೆಯಿಂದ ಸ್ಪಂದಿಸಿ ನ್ಯಾಯ ಒದಗಿಸಲು ಮುಂದಾಗಿದ್ದೇನೆ. ಬಾಲಕಾರ್ಮಿಕರ ಕೇಂದ್ರ ತೆರೆದು ಅಂತಹ ಮಕ್ಕಳಿಗೆ ಆಸರೆಯಾಗಿದ್ದೇನೆ ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಅದರ ನಿಯಂತ್ರಣಕ್ಕೆ ಪಣ ತೊಟ್ಟು ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಇತರೆ ಕೆಲಸಗಳಲ್ಲಿ ಭಾಗಿಯಾಗಿ ಜನಸೇವೆ ಮಾಡಿರುವೆ ಕ್ಷೇತ್ರದಲ್ಲಿ ಶೇ 50ರಷ್ಟು ಮಹಿಳೆಯರು ಇದ್ದು ಮಹಿಳೆಯಾದ ನನಗೆ ಈ ಭಾರಿ ಟಿಕೆಟ್ ನೀಡಿದಲ್ಲಿ ಕ್ಷೇತ್ರದ ರೈತರಿಗೆ  ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸುವುದು ಮೊದಲ ಆದ್ಯತೆಯಾಗಿದ್ದು  ನಂತರವಾಗಿ ಹೆಣ್ಣುಮಕ್ಕಳು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣದಿಂದ ವಂಚಿತರಾಗದಂತೆ  ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನದ ಪ್ರತ್ಯೇಕ ಪಿಯು ಹಾಗೂ ಡಿಪ್ಲೊಮೊ ಕಾಲೇಜು ಸ್ಥಾಪನೆ , ಗುಡಿ ಕೈಗಾರಿಕೆ, ಕೂಲಿ ಕಾರ್ಮಿಕರನ್ನು ಗುಳೇ ತಪ್ಪಿಸುವಲ್ಲಿ ಬೇಕಾದ ಅನೇಕ ಜನಪರ ಯೋಜನೆಗಳನ್ನು ರೂಪಿಸುವ ಪ್ರಣಾಳಿಕೆ ನನ್ನದಾಗಿದೆ ಎಂದರು. ರಾಜ್ಯಕ್ಕೆ ನಾ ನಾಯಕಿ ಕಾರ್ಯಕ್ರಮಕ್ಕೆ ಆಗಮಿಸಲಿರುವ ಪ್ರಿಯಾಂಕಾ ವಾದ್ರಾ ಇವರಿಗೆ ರಾಜ್ಯದ ಮಹಿಳೆಯರ ಪರವಾಗಿ ಅದ್ದೂರಿ ಸ್ವಾಗತ ಕೋರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ನ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು