ಕೂಡ್ಲಿಗಿ ಕ್ಷೇತ್ರದಲ್ಲಿ  ಶಾಂತಿಯುತ ಶೇ 76.58ರಷ್ಟು ಮತದಾನ.ಕಳೆದ ಬಾರಿಗಿಂತ ಶೇ 6ರಷ್ಟು ಹೆಚ್ಚಳ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 8 :- ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ನಿನ್ನೆ ನಡೆದ ಮತದಾನದಲ್ಲಿ  ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 250 ಮತಗಟ್ಟೆಗಳಲ್ಲಿ ಮಂಗಳವಾರ ಯಾವುದೇ ಅಡೆತಡೆ ಇಲ್ಲದೆ  ಶಾಂತಿಯುತ ಮತದಾನ ನಡೆದಿದ್ದು, ಉರಿ  ಬಿಸಿಲಿನ್ನು ಲೆಕ್ಕಿಸದೆ ಝಳದ ನಡುವೆಯೂ  ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ  ಒಟ್ಟು ಶೇ. 76.58ರಷ್ಟು ಮತದಾನದ ಹಕ್ಕು ಚಲಾವಣೆಗೊಂಡಿದೆ ಅಲ್ಲದೆ ಕಳೆದ ಚುನಾವಣೆಗಿಂತ ಈ ಬಾರಿ ಮತದಾನ ಜಾಗೃತಿ ಕಾರ್ಯದಿಂದ ಶೇ 6ರಷ್ಟು ಮತದಾನ ಹೆಚ್ಚಳವಾಗಿದೆ ಎಂದು ಹೇಳಬಹುದಾಗಿದೆ.
ಕಾನಹೊಸಹಳ್ಳಿಯ ಹೊರವಲಯದ ಕುಲುಮೆಹಟ್ಟಿ ಮತಕೇಂದ್ರ 191ರಲ್ಲಿ ಬೆಳಗ್ಗೆ 11ಗಂಟೆ ವೇಳೆಗೆ ವಿವಿ ಪ್ಯಾಟ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಅಧಿಕಾರಿಗಳು ತಕ್ಷಣವೆ ಅದನ್ನು ಬದಲಿದ್ದರಿಂದ ಯಾವುದೇ ಸಮಸ್ಯೆಯಾಗಲಿಲ್ಲ. ಇನ್ನುಳಿದ ಕಡೆ ಯಾವುದೇ ತೊಂದರೆ ಇಲ್ಲದಂತೆ ಬೆಳಗ್ಗೆ 7ರಿಂದ ಸಂಜೆ 6ಗಂಟೆಯವರೆಗೆ ಮತದಾನ ಯಾವುದೇ ಅಡ್ಡಿ ಆತಂಕವಿಲ್ಲದೆ ಜರುಗಿತು..
ಕೂಡ್ಲಿಗಿ ಕ್ಷೇತ್ರದಲ್ಲಿ 1 06,034ಪುರುಷರು, 1,03,951 ಮಹಿಳೆಯರು  ಹಾಗೂ ಇತರೆ 11 ಸೇರಿ ಒಟ್ಟು  2,09,996ಮತದಾರರಿದ್ದು, ಆ ಪೈಕಿ 82,177 ಪುರುಷರು, 78640 ಮಹಿಳೆಯರು  ಹಾಗೂ ಇತರೆ  6 ಸೇರಿ ಒಟ್ಟು  1,60,823ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದರು.
 ಕ್ಷೇತ್ರ ವ್ಯಾಪ್ತಿಯ 250 ಮತಗಟ್ಟೆಗಳ ಪೈಕಿ ಬಹುತೇಕ ಕಡೆ ಬೆಳಗ್ಗೆಯಿಂದಲೇ  ಮತದಾರರು ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುವ ದೃಶ್ಯ ಕಂಡುಬಂದಿತು,
ಬೆಳಗ್ಗೆ 9 ಗಂಟೆಗೆ ಶೇ10.09ರಷ್ಟು ಮತದಾನವಾಗಿತ್ತು. ಅದರಂತೆ, ಬೆಳಗ್ಗೆ 11 ಗಂಟೆಗೆ ಶೇ27.93,ಮಧ್ಯಾಹ್ನ 1 ಗಂಟೆಗೆ ಶೇ. 47.46, 3ಗಂಟೆಗೆ ಶೇ60.63ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆಗೆ ಶೇ.73.09ರಷ್ಟು  ಮತದಾನವಾಗಿದ್ದು,ಸಂಜೆ 6 ಗಂಟೆಯ ನಂತರ ಶೇ.76.56ರಷ್ಟು ಮತದಾನವಾಗಿದೆ.
ಹಕ್ಕು ಚಲಾಯಿಸಿದ ಗಣ್ಯರು: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಸ್ವಗ್ರಾಮ ನರಸಿಂಹನಗಿರಿಯ ಮತಗಟ್ಟೆ ಸಂಖ್ಯೆ 86ಕ್ಕೆ ತಾಯಿ ಓಬಮ್ಮ, ಪತ್ನಿ ಡಾ.ಪುಷ್ಪಾ ಅವರ ಜತೆ ಆಗಮಿಸಿ ಹಕ್ಕು ಚಲಾಯಿಸಿದರೆ, ಸಹೋದರ ತಮ್ಮಣ್ಣ ತಮ್ಮ ಪತ್ನಿಯೊಂದಿಗೆ ಅದೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.ಮಾಜಿ ಶಾಸಕ ಕೆ.ವಿ.ರವೀಂದ್ರನಾಥ ಬಾಬು ಅವರು ಚಿಕ್ಕಜೋಗಿಹಳ್ಳಿಯ ಮತಗಟ್ಟೆ ಸಂಖ್ಯೆ 128ರಲ್ಲಿ ಮತ ಹಾಕಿದರು. ಅಲ್ಲದೆ, ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಹಾಗೂ ಮಠಾಧೀಶರ ಧರ್ಮ ಪರಿಷತ್ ವಿಜಯನಗರ- ಬಳ್ಳಾರಿ ಜಿಲ್ಲಾಧ್ಯಕ್ಷ ಪ್ರಶಾಂತಸಾಗರ ಸ್ವಾಮೀಜಿಯವರು ಕೂಡ್ಲಿಗಿ ಪಟ್ಟಣದ ಮತಗಟ್ಟೆ ಸಂಖ್ಯೆ 39ರಲ್ಲಿ ಮತ ಹಾಕಿದರೆ, ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು ಮತಗಟ್ಟೆ ಸಂಖ್ಯೆ 216ರಲ್ಲಿ ಹಕ್ಕು ಚಲಾಯಿಸಿದರು ಮತ್ತು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಪಟ್ಟಣದ ಸೊಲ್ಲಮ್ಮ ಮಂದಿರ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ 44ಕ್ಕೆ ತೆರಳಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ  ಸಾಣೆಹಳ್ಳಿಯ ಮತಗಟ್ಟೆ ಸಂಖ್ಯೆ 1ರಲ್ಲಿ ಶೇ90.81 ರಷ್ಟು ಅತಿಹೆಚ್ಚು ಮತದಾನವಾಗಿದ್ದರೆ, ಚಿಕ್ಕಜೋಗಿಹಳ್ಳಿ ತಾಂಡಾದ ಮತಕೇಂದ್ರ ಸಂಖ್ಯೆ 131ರಲ್ಲಿ ಶೇ.53.03ರಷ್ಟು ಅತಿ ಕಡಿಮೆ ಮತದಾನವಾಗಿರುವುದು ತಿಳಿದಿದೆ.