ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸ – ಬಂಗಾರು ಹನುಮಂತು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ. 5 :- ಹತ್ತಾರು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗುವ ಮೂಲಕ ಕೂಡ್ಲಿಗಿ ಕ್ಷೇತ್ರದಲ್ಲಿ ಜನರ ಪ್ರೀತಿ, ವಿಶ್ವಾಸದ ಜೊತೆಗೆ ಆಶೀರ್ವಾದ ನನ್ನ ಮೇಲಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕೋಶಾಧ್ಯಕ್ಷ ಹಾಗೂ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಂಗಾರು ಹನುಮಂತು ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಬಂಗಾರು ಹನುಮಂತು ಅಭಿಮಾನಿ ಬಳಗದಿಂದ ಬುಧವಾರ ನಡೆದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿದ ನಂತರ ಮಾತನಾಡುತ್ತಾ  ಧಾರ್ಮಿಕ ಕಾರ್ಯಗಳು, ಕ್ರೀಡಾ ಚಟುವಟಿಕೆಗಳು, ಸಾಮಾಜಿಕ ನಾಟಕಗಳು ಸೇರಿ ಅನೇಕ ವೃದ್ಧಾಶ್ರಮಗಳಿಗೆ ಕೈಲಾದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇನೆ. ಜೊತೆಗೆ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಂಘಟನೆಗೆ ಒತ್ತು ನೀಡಿದ್ದೇನೆ. ಇಂಥ ಅನೇಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನನ್ನನ್ನು ಗುರುತಿಸುವ ಮೂಲಕ ಪ್ರೀತಿ, ವಾತ್ಸಲ್ಯ ತೋರುತ್ತಾ ಆಶೀರ್ವದಿಸುತ್ತಿದ್ದಾರೆ. ಹೀಗಾಗಿ, ಕ್ಷೇತ್ರದ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ನಾನೆಂದೂ ಋಣಿಯಾಗಿದ್ದೇನೆ ಎಂದು ತಿಳಿಸಿದರು.
ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದು, ನನಗೆ ಬಿಜೆಪಿ ವರಿಷ್ಠರು ಟಿಕೆಟ್ ನೀಡುತ್ತಾರೆಂಬ ಭರವಸೆ ಇದೆ. ಜೊತೆಗೆ, ವಿಜಯನಗರ ಜಿಲ್ಲೆ ಹಾಗೂ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿ ಎಲ್ಲಾ ವರ್ಗದ ಜನರ ಬೆಂಬಲ ಸಿಗಲಿದೆ ಎಂದು ಬಂಗಾರು ಹನುಮಂತು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ, ಮುಖಂಡರಾದ ಹೊಸಪೇಟೆ ಅಯ್ಯಾಳಿ ತಿಮ್ಮಪ್ಪ, ರಾಘವೇಂದ್ರ ಹಾಗೂ ಕೂಡ್ಲಿಗಿ ತಾಲೂಕಿನ ಗುಡೇಕೋಟೆ, ಕಾನಹೊಸಹಳ್ಳಿ, ಉಜ್ಜಯಿನಿ, ಕೂಡ್ಲಿಗಿ ಸೇರಿ ವಿವಿಧ ಹಳ್ಳಿಗಳಿಂದ ಪಕ್ಷಾತೀತವಾಗಿ ಆಗಮಿಸಿದ್ದ ಅಭಿಮಾನಿಗಳು ಬಂಗಾರು ಹನುಮಂತು ಅವರಿಗೆ ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಜನ್ಮದಿನದ ಶುಭಾಶಯಗಳನ್ನು ಕೋರಿದರು.
ಕೋಟ್ : ಕೂಡ್ಲಿಗಿ ಕ್ಷೇತ್ರವೂ ಸೇರಿದಂತೆ ಇತರೆಡೆಗಳಲ್ಲಿ ಸಮಾಜ ಸೇವೆ ಮಾಡುತ್ತಿರುವ ನನ್ನನ್ನು ಜನರು ಗುರುತಿಸಿ ಪ್ರೀತಿ ತೋರುತ್ತಿದ್ದಾರೆ. ಬಂಗಾರು ಹನುಮಂತು ಅಭಿಮಾನಿ ಬಳಗದವರು ನನ್ನ ಹುಟ್ಟು ಹಬ್ಬದ ಕಾರ್ಯಕ್ರಮ ಮಾಡಿ ಪ್ರೀತಿ ತೋರಿರುವುದು ನನ್ನಲ್ಲಿ ಜವಾಬ್ದಾರಿ ಹೆಚ್ಚಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಕೂಡ್ಲಿಗಿ ಕ್ಷೇತ್ರದಲ್ಲಿ ನನಗೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿದೆ.