ಕೂಡ್ಲಿಗಿ :ಕೋವಿಡ್ ಬೆಡ್ 32ಕ್ಕೆ ಹೆಚ್ಚಳ. ಸಧ್ಯದಲ್ಲೇ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಯೂನಿಟ್

ಕೂಡ್ಲಿಗಿ. ಮೇ. 2 :- ದಿನೇ ದಿನೇ ಕೋವಿಡ್ ನ ಎರಡನೇ ಅಲೆ ಅಬ್ಬರದಿಂದ ಸಾವು ನೋವಿನ ಪ್ರಮಾಣ ಜಾಸ್ತಿಯಾಗುತ್ತಿರುವ ಮತ್ತು ತಾಲೂಕಿನಲ್ಲಿ ಕೋವಿಡ್ ಪಾಸಿಟಿವ್ ವರದಿ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಂಜಾಗ್ರತೆಯಾಗಿ ಕೋವಿಡ್ ಬೆಡ್ ಗಳನ್ನು 21ರಿಂದ 32ಕ್ಕೆ ಹೆಚ್ಚಿಸಿದ್ದು ಆಕ್ಸಿಜನ್ ತೊಂದರೆಯಾಗದಂತೆ ಕೂಡ್ಲಿಗಿ ಆಸ್ಪತ್ರೆ ಆವರಣದಲ್ಲಿ ಸ್ಥಳ ಪರಿಶೀಲನೆ ಮಾಡಿದ್ದು ಸದ್ಯದಲ್ಲೇ ಆಕ್ಸಿಜನ್ ಯೂನಿಟ್ ತಯಾರಿಕಾ ಘಟಕ ಸಹ ಪ್ರಾರಂಭವಾಗಲಿದೆ ಎಂದು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿನಯ್ ಸಂಜೆವಾಣಿ ಪ್ರತಿನಿಧಿಗೆ ತಿಳಿಸಿದರು.
ಈ ಹಿಂದೆ 21 ಕೋವಿಡ್ ಬೆಡ್ ನಿರ್ಮಿಸಲಾಗಿತ್ತು ಎರಡನೇ ಅಲೆ ಜೋರಾಗುತ್ತಿರುವ ಪರಿಣಾಮವಾಗಿ ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ, ತಾಲೂಕು ತಹಸೀಲ್ದಾರ್ ಮಹಾಬಲೇಶ್ವರ ಹಾಗೂ ತಾಲೂಕು ವೈದ್ಯಾಧಿಕಾರಿಗಳ ಮುಂಜಾಗ್ರತೆಯಲ್ಲಿ ತಾಲೂಕಿನ ಕೊರೋನಾ ರೋಗಿಗಳಿಗೆ ತೊಂದರೆಯಾಗದಂತೆ ಈ ಹಿಂದೆ ಇದ್ದ ಜನರಲ್ ರೋಗಿಗಳಿಗೆ ಬಳಸಲಾಗುತ್ತಿದ್ದ ವಾರ್ಡ್ ನ್ನು ಕೋವಿಡ್ ವಾರ್ಡ್ಗೆ ಬಳಸಿಕೊಂಡು ಮೇಲ್ಮಹಡಿಯಲ್ಲಿ ಜನರಲ್ ವಾರ್ಡ್ ತೆಗೆದಿರುವುದಾಗಿ ಮತ್ತು 21ಬೆಡ್ ಗಳ ಕೋವಿಡ್ ವಾರ್ಡ್ ಈಗ ಹೆಚ್ಚಳ ಮಾಡಿ 32ಕೋವಿಡ್ ಬೆಡ್ ಈಗಾಗಲೇ ನಿರ್ಮಿಸಲಾಗಿದೆ. ಕೋವಿಡ್ ವಾರ್ಡ್ ನಲ್ಲಿ 32ನಾರ್ಮಲ್ ಬೆಡ್ ನಲ್ಲಿ 7ಐಸಿಯು, 6ವೆಂಟಿಲೇಟರ್ ಬೆಡ್ ಗಳಿವೆ ಕೂಡ್ಲಿಗಿ ಆಸ್ಪತ್ರೆಯ ಕೋವಿಡ್ ವಾರ್ಡಿನಲ್ಲಿ ಈಗ 26 ಪಾಸಿಟಿವ್ ಪ್ರಕರಣಗಳಿದ್ದು ಆದರಲ್ಲಿ 12ಕೋವಿಡ್ ರೋಗಿಗಳು ಆಕ್ಸಿಜನ್ ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದರೆ ಮತ್ತು ಈ ಸಂಬಂಧವಾಗಿ ಆಸ್ಪತ್ರೆಗೆ ಹೆಚ್ಚುವರಿ ಸಿಬ್ಬಂದಿ ಅವಶ್ಯಕವಾಗಿದ್ದು ಸದ್ಯದಲ್ಲೇ ಈ ಸಿಬ್ಬಂದಿ ನೇಮಕದ ಬಗ್ಗೆ ತಾಲೂಕು ಆಡಳಿತ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿದಿದೆ ಎಂದು ತಿಳಿಸಿದರು.
ಸದ್ಯದಲ್ಲೇ ಕೂಡ್ಲಿಗಿ ಆಸ್ಪತ್ರೆಲಿ ಆಕ್ಸಿಜನ್ ತಯಾರಕ ಘಟಕ ಸ್ಥಾಪನೆ :- ಕೊರೋನಾ ಪೀಡಿತರು ಉಸಿರಾಟದ ತೊಂದರೆಯಿಂದ ಬಳಲಿ ಪ್ರಾಣ ಹೋಗಬಾರದೆಂಬ ನಿಟ್ಟಿನಲ್ಲಿ ಶಾಸಕರು ಮತ್ತು ತಾಲೂಕು ಆಡಳಿತ ಹಾಗೂ ತಾಲೂಕು ಆರೋಗ್ಯ ಇಲಾಖೆ ಮನಗಂಡು ಈಗಾಗಲೇ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು ಸದ್ಯದಲ್ಲೇ ಆಕ್ಸಿಜನ್ ತಯಾರಿಕಾ ಘಟಕ ಸ್ಥಾಪನೆಯಾಗಲಿದ್ದು ಯಾವ ರೋಗಿಯು ಉಸಿರಾಟದ ತೊಂದರೆಯಿಂದ ಬಳಲದಂತೆ ಪ್ರಾಣರಕ್ಷಣೆ ಮಾಡುವಲ್ಲಿ ತುಂಬಾ ಅನುಕೂಲವಾಗಲಿದೆ ಎಂದು ಡಾ.ವಿನಯ್ ತಿಳಿಸಿದರು. ಕೋವಿಡ್ ಮುಂಜಾಗ್ರತೆಗೆ ಸ್ಪಂದಿಸಿ ಆಸ್ಪತ್ರೆಯಲ್ಲಿ ಸೌಲಭ್ಯ ಒದಗಿಸಲಿರುವ ಜಿಲ್ಲಾ ಮತ್ತು ತಾಲೂಕು ಅರೋಗ್ಯ ಇಲಾಖೆ, ಶಾಸಕರು, ತಾಲೂಕು ಆಡಳಿತದ ಸ್ಪಂದನೆಗೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅಭಿನಂದನೆ ಸಲ್ಲಿಸಿದರು.