ಕೂಡ್ಲಿಗಿ ಕೊತ್ತಲಾ ಆಂಜನೇಯ ಸ್ವಾಮಿ ರಥೋತ್ಸವ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.31 :- ಪಟ್ಟಣದ ಶ್ರೀ ಕೊತ್ತಲ ಆಂಜನೇಯ ಸ್ವಾಮಿ ರಥೋತ್ಸವವು ಶ್ರೀರಾಮ ನವಮಿ ದಿನವಾದ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಪಟ್ಟಣದ ಆರಾಧ್ಯ ದೈವ ಶ್ರೀ ಕೊತ್ತಲ ಆಂಜನೇಯಸ್ವಾಮಿ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳಿಂದ ರಥದ ಬಳಿಗೆ ತಂದು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ರಥವನ್ನು ಪೂಜಿಸುವ ಮೂಲಕ ಭಕ್ತರು ಜೈ ಆಂಜನೇಯ ಎಂದು ಘೋಷಣೆ ಕೂಗುತ್ತಾ ರಥಕ್ಕೆ ಕಟ್ಟಿದ ಮಿಣಿಯಿಂದ  ಎಳೆದರು. ರಥವನ್ನು ಕೊತ್ತಲ ಆಂಜನೇಯಸ್ವಾಮಿ ದೇವಸ್ಥಾನದಿಂದ ಮದಕರಿ ವೃತ್ತದ ಮೂಲಕ ಆಂಜನೇಯ  ಪಾದಗಟ್ಟೆಯವರೆಗೆ ಎಳೆಯಲಾಯಿತು.
ಈ ಸಂದರ್ಭದಲ್ಲಿ ಭಕ್ತರು ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು. ರಥವು ಪಾದಗಟ್ಟೆಯ ಬಳಿ ಬರುತ್ತಿದ್ದಂತೆ ಬಾನಂಗಳದಲ್ಲಿ ಚಿತ್ತಾರ ಮೂಡಿಸುವಂತೆ ಪಟಾಕಿಗಳನ್ನು ಸಿಡಿಸಲಾಯಿತು. ನಂತರ ಪಾದಗಟ್ಟೆಯಿಂದ ರಥವನ್ನು ಮೂಲಸ್ಥಳಕ್ಕೆ ವಾಪಸ್ ಎಳೆತಂದು ನಿಲ್ಲಿಸಲಾಯಿತು. ಈ ರಥೋತ್ಸವಕ್ಕೆ ಪಟ್ಟಣ ಸೇರಿ ತಾಲೂಕಿನ ನಾನಾ ಹಳ್ಳಿಗಳಿಂದ ಭಕ್ತರು ಆಗಮಿಸಿದ್ದರು.
ರಥ ಎಳೆಯುವುದಕ್ಕೂ ಮುನ್ನ ಕೊತ್ತಲ ಆಂಜನೇಯಸ್ವಾಮಿಯ ಪಟ ಹರಾಜು ಮಾಡಲಾಗಿದ್ದು  ಈ ಬಾರಿ ಪಟವನ್ನು 2,61,101 ರೂ.ಗೆ ಭಕ್ತ ಬಂಗಾರು ಹನುಂಮತು ಅವರು ಹರಾಜಿನಲ್ಲಿ ಪಡೆದುಕೊಂಡರು. ಈ ಪಟವನ್ನು ಸತತ 16 ವರ್ಷಗಳಿಂದ ಬಂಗಾರು ಹನುಂಮತು ಪಡೆದಿರುವುದು ವಿಶೇಷವಾಗಿತ್ತು.