ಕೂಡ್ಲಿಗಿ ಕಾಲೇಜ್ ಮೈದಾನ ಉಳಿವಿಗಾಗಿ,
 ಐದನೇ ದಿನದ ಕಾಲಿಟ್ಟ ಅನಿರ್ಧಿಷ್ಟ ನಿರಶನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.7 :- ಪಟ್ಟಣದ ಮೈಲಾರ ಮಹದೇವ ಕ್ರೀಡಾಂಗಣ ಒತ್ತುವರಿ ಸಮಸ್ಯೆ ನೀಗಿಸಿ, ಶಾಲೆಗೆ ಆಟದ ಮೈದಾನ ಖಾತೆ ಮಾಡಿಕೊಡುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ನಿರಶನ ಇಂದಿಗೆ ಐದನೇ ದಿನಕ್ಕೆ ಕಾಲಿಟ್ಟಿದ್ದು ಪಟ್ಟಣದ ಅನೇಕ ಸಂಘಟನೆ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಹಿರಿಯ ನಾಗರೀಕರು  ಹಾಗೂ ನಿವೃತ್ತ ನೌಕರರು  ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಗಾಂಧಿ ಚಿತಾಭಸ್ಮ ಸ್ಮಾರಕ ಇರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಬಳಿ ಮೈದಾನ ಉಳಿಸಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ನಿರಶನಕ್ಕೆ ದಿನೇದಿನೇ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ 1945ರಿಂದ ಸರಕಾರಿ ಶಾಲೆ, ಕಾಲೇಜಿನ ಸ್ವಾಧೀನದಲ್ಲಿರುವ ಆಟದ ಮೈದಾನಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಸ್ವಾಧೀನದಲ್ಲಿರುವ ಆಸ್ತಿಗಳನ್ನು ಶಾಲಾ, ಕಾಲೇಜುಗಳ ಹೆಸರಿನಲ್ಲಿ ಖಾತೆ ಮಾಡುವಂತೆ ಕಂದಾಯ ಇಲಾಖೆಯ ಆದೇಶವಿದ್ದರೂ ಸಂಬಂದಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ಪಟ್ಟಣದ ಮೈಲಾರ ಮಹದೇವ ಕ್ರೀಡಾಂಗಣದ ಆಸ್ತಿಯು ಶಾಲೆಯ ಹೆಸರಿಗೆ ಖಾತೆ ಆಗುವವರೆಗೂ ನಿರಶನ ಕೈಬಿಡುವುದಿಲ್ಲ ಎಂದು ಮೈದಾನ ಉಳಿಸಿ ಹೋರಾಟ ಸಮಿತಿಯವರು ಪಟ್ಟು ಹಿಡಿದು ನಿರಶನದಲ್ಲಿ ತೊಡಗಿದ್ದಾರೆ ಇದಕ್ಕೆ ಬೆಂಬಲವಾಗಿ .
 ಪಟ್ಟಣದ ನಾಗರಿಕರು, ರೈತ ಸಂಘದ ಮುಖಂಡರು ಸೇರಿ ನಾನಾ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿವೆ.
ಭರವಸೆ ನೀಡಿದ ಬಿಜೆಪಿ ಟಿಕೇಟ್ ಆಕಾಂಕ್ಷಿ  : ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಂಗಾರು ಹನುಮಂತು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡುತ್ತ  ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅವರ ಗಮನಕ್ಕೆ ಈ ವಿಷಯ ತರಲಾಗುವುದು ಸರ್ಕಾರದ ಆದೇಶಗಳನ್ವಯ ಶಾಲಾ ಮೈದಾನವನ್ನು ಶಾಲಾಕಾಲೇಜಿನ ಹೆಸರಿಗೆ ಖಾತೆ ಮಾಡಿಕೊಡಲು ಸಂಬಂದಿಸಿದ ಅಧಿಕಾರಿಗಳಿಗೆ ತಿಳಿಸುವಂತೆ ಕಂದಾಯ ಸಚಿವರಿಗೆ ತಿಳಿಸುವ ಭರವಸೆಯನ್ನು ಬಿಜೆಪಿ ಮುಖಂಡ ಬಂಗಾರು ಹನುಮಂತು ನೀಡಿದರು.
ಈ ಸಂದರ್ಭದಲ್ಲಿ ಮೈದಾನ ಉಳಿಸಿ ಹೋರಾಟ ಸಮಿತಿಯ ಎ.ಎಂ.ರಾಘವೇಂದ್ರ, ವಾಲಿಬಾಲ್ ವೆಂಕಟೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ದೇವರಮನಿ ಮಹೇಶ್ ಸೇರಿ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಎನ್.ಟಿ.ಶ್ರೀನಿವಾಸ್ ಬಳಗದ ನಿವೃತ್ತ ತಾಪಂ ಇಒ ಜಿ.ಎಂ.ಬಸಣ್ಣ, ನಿವೃತ್ತ ಶಿಕ್ಷಕ ಸಾಹುಕಾರ್ ಓಬಯ್ಯ, ಎಂಜನಿಯರ್ ಶಫಿವುಲ್ಲಾ, ಮರುಳಸಿದ್ದಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಕಾವಲುಪಡೆಯ ತಾಲೂಕು ಅಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ಪದಾಧಿಕಾರಿಗಳಾದ ನರಸಿಂಹ, ಅಜೇಯಕುಮಾರ, ಯುವಘಟಕದ ಕಾಟೇರ ಲಂಕೇಶ, ಹನುಮಂತ, ಮಲ್ಲಾಪುರದ ಭರತ್ ಸೇರಿ ಅನೇಕರು ಇದ್ದರು.