
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.3 :- ಇಡೀ ತಾಲೂಕಿನಲ್ಲಿ ದೊಡ್ಡಮಟ್ಟದ ಕ್ರೀಡೆ, ಸಭೆ ಸಮಾರಂಭ, ರಾಷ್ಟ್ರ ನಾಯಕರು ಹೆಲಿಕ್ಯಾಪ್ಟರ್ ನಲ್ಲಿ ಬರಬೇಕೆಂದರೆ ಹೆಲಿಪ್ಯಾಡ್ ಸ್ಥಳವೆಂದರೆ ಅದುಮೈಲಾರ ಮಹಾದೇವ ಕ್ರೀಡಾಂಗಣ ಎಂದು ಹೇಳಲಾಗುತ್ತಿದ್ದು ಅಂತಹ ಕ್ರೀಡಾಂಗಣ ಕೆಲವರ ಅಡ್ಡಿಯಿಂದ ಸಮಸ್ಯೆಯ ಸುಳಿಯಲ್ಲಿದ್ದು ಮೈದಾನದ ಉಳಿವಿಗಾಗಿ 23ವರ್ಷದಿಂದ ಹೋರಾಟ ನಡೆಯುತ್ತಿದೆ ಮತ್ತು ಅಧಿಕಾರಿಗಳ ಉದಾಸೀನತೆಯಲ್ಲಿ ಬಗೆಹರಿಯದೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದ್ದು ಹೋರಾಟಗಾರರಲ್ಲಿ ತುಂಬಾ ಬೇಸರ ತಂದಿದೆ.
ಪಟ್ಟಣದಲ್ಲಿ 1945ರಲ್ಲಿ ಆರಂಭವಾಗಿದ್ದ ಬೋರ್ಡ್ ಹೈಸ್ಕೂಲ್ ಪ್ರಸ್ತುತ ಸರ್ಕಾರಿ ಜೂನಿಯರ್ ಕಾಲೇಜು ಆಗಿದೆ.ಈ ಕಾಲೇಜಿನ ಆಟದ ಮೈದಾನವಾಗಿರುವ ಪಟ್ಟಣದ ಸರ್ವೆ ನಂಬರ್ 693/ಸಿ ಹೊಂದಿರುವ 3-88ಎಕರೆ ವಿಸ್ತೀರ್ಣದ ಮೈಲಾರ ಮಹದೇವ ಕ್ರೀಡಾಂಗಣವು ಕಳೆದ 75ವರ್ಷಗಳಿಂದ ಶಾಲಾ, ಕಾಲೇಜಿನ ಸ್ವಾಧೀನದಲ್ಲಿದೆ ಎನ್ನುವುದಕ್ಕೆ ನಾನಾ ದಾಖಲೆಗಳಿವೆ. ಆದರೂ, ಕೆಲವರಿಂದ ಅಡ್ಡಿ, ಆತಂಕಗಳು ಎದುರಾಗುತ್ತಿವೆ.
ದಾನಿಗಳು, ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆ, ಕಾಲೇಜುಗಳ ಆರಂಭಕ್ಕಾಗಿ ತಮ್ಮ ನಿವೇಶನ, ಜಮೀನನ್ನು ದಾನವಾಗಿ ನೀಡಿರುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೂಡ್ಲಿಗಿಯಲ್ಲಿ 1945ರಲ್ಲಿ ಆರಂಭವಾಗಿದ್ದ ಬೋರ್ಡ್ ಹೈಸ್ಕೂಲ್‌ಗೆ ಆಟದ ಮೈದಾನಕ್ಕಾಗಿ ಶಿಕ್ಷಣ ಪ್ರೇಮಿಯೊಬ್ಬರು ದಾನವಾಗಿ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ. ಆ ಸಂದರ್ಭದಲ್ಲಿ ಶಾಲೆಯ ಹೆಸರಿನಲ್ಲಿ ಜಮೀನು ಖಾತೆ ಮಾಡಿಸಿಲ್ಲ. ಆದರೆ, ಶಾಲಾ, ಕಾಲೇಜಿನ ಸ್ವಾಧೀನದಲ್ಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಬಂಜರು ಭೂಮಿ ಅಭಿವೃದ್ಧಿ ಯೋಜನೆಯಡಿ ಮೈದಾನದಲ್ಲಿ ಬೋರ್‌ವೆಲ್ ಕೊರೆಸಿ ನೀರೆತ್ತುವ ಮೂಲಕ ‘ಶಾಲಾ ಸಸ್ಯ ವನ’ ಮಾಡಿ ಶಾಲೆಯ ಬೆಟರ್‌ಮೆಂಟ್ ಕಮಿಟಿಯ ಬ್ಯಾಂಕ್ ಖಾತೆಗೆ 1 ಲಕ್ಷ ರೂ. ಸಂದಾಯ ಮಾಡಿದೆ. ಈ ಮೈದಾನದಲ್ಲಿ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕವೂ ಇದೆ ಹಾಗೂ ಈ ಮೈದಾನಕ್ಕೆ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವ ಕ್ರೀಡಾಂಗಣ ಎಂದು ನಾಮಕರಣ ಸಹ ಮಾಡಲಾಗಿದ್ದು ಇನ್ನು ಅನೇಕ ಮೂಲ ಕುರುಹುಗಳು ದಾಖಲೆಗಳಿದ್ದರೂ ಆದರೆ, ಆಟದ ಮೈದಾನವು ತಮಗೆ ಸೇರಿದ್ದೆಂದು ಖಾಸಗಿಯವರು ಕೃಷಿಯೇತರ ಜಮೀನಾಗಿ ಪರಿವರ್ತಿಸಿ, ನಿವೇಶನಗಳನ್ನು ಮಾರಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ 2000ನೇ ಇಸ್ವಿಯಲ್ಲಿ ಕೂಡ್ಲಿಗಿ ಬಂದ್ ಮಾಡಿ ಮೈದಾನದ ಉಳಿವಿಗಾಗಿ ಸಾಕಷ್ಟು ಹೋರಾಟಗಳು ಮಾಡಲಾಗಿತ್ತು.ಸುಮಾರು 23ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ.
ಅಲ್ಲದೆ, ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ 2000ರ ಜೂನ್ 20ರಂದು ನಡೆದ ವಿಶೇಷ ಸಭೆಯಲ್ಲಿ ಶಾಲಾ ಆಟದ ಮೈದಾನದಲ್ಲಿರುವ 1-54ನಿವೇಶನಗಳ ಡೋರ್ ನಂಬರ್‌ಗಳನ್ನು ರದ್ದುಪಡಿಸಿ ಠರಾವು ಪಾಸ್ ಮಾಡಲಾಗಿದೆ. ಕೂಡ್ಲಿಗಿ ಕ್ಷೇತ್ರದ ಆಗಿನ ಶಾಸಕರಾಗಿದ್ದ ಸಿರಾಜ್ ಶೇಖ್ ಅವರು 2001 ಜುಲೈನಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗೆ ಪತ್ರ ಬರೆದು, ಆಟದ ಮೈದಾನವು ಶಾಲೆ ವಿದ್ಯಾರ್ಥಿಗಳು ಹಾಗೂ ನಾಗರಿಕರ ಹಿತದೃಷ್ಟಿಯಿಂದ ವ್ಯವಸಾಯೇತರ ಉದ್ದೇಶಕ್ಕೆ ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿದ್ದಾರೆ.
ಅಧಿಕಾರಿಗಳ ಉದಾಸೀನ.
ಕೂಡ್ಲಿಗಿಯಲ್ಲಿರುವ ಮಹದೇವ ಮೈಲಾರ ಕ್ರೀಡಾಂಗಣವು ಕಳೆದ 75ವರ್ಷಗಳಿಂದಲೂ ಶಾಲಾ, ಕಾಲೇಜಿನ ಸ್ವಾಧೀನದಲ್ಲಿರುವುದಕ್ಕೆ ಸಸ್ಯವನ, ಬೋರ್‌ವೆಲ್, ವಿದ್ಯುತ್ ಸಂಪರ್ಕ ಸೇರಿ ನಾನಾ ದಾಖಲೆಗಳಿವೆ. ಆಟದ ಮೈದಾನದ ಸುತ್ತಲೂ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರಿಂದ ಕೆಕೆಆರ್‌ಡಿಬಿ ಯೋಜನೆಯಡಿ ಕಾಂಪೌ0ಡ್ ನಿರ್ಮಿಸಲಾಗಿದೆ. ಶಾಲಾ, ಕಾಲೇಜಿಗೆ ದಾನಿಗಳಿಂದ ನೀಡಿರುವ ಜಾಗದ ಖಾತೆಯಾಗದಿರುವ ಆಸ್ತಿಗಳನ್ನು ಆಯಾ ಶಾಲಾ, ಕಾಲೇಜುಗಳ ಹೆಸರಿನಲ್ಲಿ ಖಾತೆ ಮಾಡಿಕೊಳ್ಳುವಂತೆ ಕಂದಾಯ ಇಲಾಖೆಯ ಆದೇಶವಿದ್ದರೂ, ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಸ್ಥಳೀಯ ತಹಸೀಲ್ದಾರ್‌ರು ನಿರ್ಲಕ್ಷ್ಯ ವಹಿಸಿದ್ದಾರೆಂದು ಮೈದಾನ ಉಳಿಸಿ ಹೋರಾಟಗಾರರಾದ ರಾಘವೇಂದ್ರ, ಪಟ್ಣಶೆಟ್ರು ಪಂಪಣ್ಣ ವೆಂಕಟೇಶ್, ಅವರು ಆರೋಪಿಸಿದ್ದಾರೆ.