ಕೂಡ್ಲಿಗಿ : ಕಾರು ಪಲ್ಟಿ – ಇಬ್ಬರಿಗೆ ಗಾಯ.

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು.13 :- ಸಂಡೂರು ಕಡೆಗೆ ಹೊರಟಿದ್ದ ಕಾರೊಂದು ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಹೊಡೆದು ಪಕ್ಕದ ತಗ್ಗಿನಲ್ಲಿ ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು ಕಾರು ಜಖಂಗೊಂಡಿರುವ ಘಟನೆ ಪಟ್ಟಣದ ಹೊರವಲಯದ ಗೋವಿಂದಗಿರಿ ಸಮೀಪದ ಮೈಲಕ್ಕನಹಳ್ಳದ ಬಳಿ ಮಂಗಳವಾರ ಸಂಜೆ ಜರುಗಿದೆ.
ವಾಸುದೇವದಾಸ್ (78) ಹಾಗೂ ಚಾಲಕ ಮಂಜುನಾಥ (50) ಗಾಯಗೊಂಡವರಾಗಿದ್ದಾರೆ ಇವರನ್ನು ತಕ್ಷಣ ಸ್ಥಳೀಯರು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಕೂಡ್ಲಿಗಿ ಕಡೆಯಿಂದ ಸಂಡೂರು ಕಡೆಗೆ  ಚಾಲಕ ಮಂಜುನಾಥನು ಕಾರನ್ನು ಅತಿವೇಗವಾಗಿ ಚಲಾಯಿಸಿಕೊಂಡು ಹೋಗಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಮೈಲಕ್ಕನಹಳ್ಳದ ಸೇತುವೆಯ ರಕ್ಷಾ ಕವಚಕ್ಕೆ ಹೊಡೆದು ಪಕ್ಕದಲ್ಲಿರುವ ತಗ್ಗಿನಲ್ಲಿ ಪಲ್ಟಿಯಾಗಿ ನಿಂತಿದ್ದು ಅದರಲ್ಲಿದ್ದ ಇಬ್ಬರನ್ನು ಘಟನೆ ನೋಡಿದ ಸ್ಥಳೀಯರು ತಕ್ಷಣ ಕಾರಿನಿಂದ ಹೊರತೆಗೆದು ಅವರನ್ನು ತಕ್ಷಣ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸುವ ಕಾರ್ಯದಲ್ಲಿ ಮಾನವೀಯತೆ ಮೆರೆದಿದ್ದಾರೆ.  ಪಲ್ಟಿಯಾಗಿದ್ದ ಕಾರು ಜಖಂಗೊಂಡಿದೆ  ಈ ಬಗ್ಗೆ ಕಾರಿನ ಚಾಲಕನ ವಿರುದ್ಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.