
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.06: ಕೂಡ್ಲಿಗಿಯ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರ ಪುತ್ರ ಡಾ.ಶ್ರೀನಿವಾಸ್ ಎನ್.ಟಿ. ಅವರಿಗೆ ಈ ಬಾರಿ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಎರಡನೇ ಪಟ್ಟಿಯಲ್ಲಿ ಘೋಷಣೆ ಮಾಡಿದೆ.
ಅವರ ತಂದೆ 1984 ಮತ್ತು 1989 ರಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಅವರು ಕೆಲ ದಿನ ಬಿಜೆಪಿ, ನಂತರ ಜೆಡಿಎಸ್ ಸೇರಿದ್ದರು.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು.
ಇತ್ತೀಚೆಗಷ್ಟೇ ಅವರು ನಿಧನರಾಗಿದ್ದರು. ಕಳೆದ ಚುನಾವಣೆಯಲ್ಲಿ ತಂದೆ ಚುನಾವಣೆಯಲ್ಲಿ ಓಡಾಡಿದ್ದ ಅವರ ಪುತ್ರ ಡಾ. ಶ್ರೀನಿವಾಸ್ ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಸೇರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ದೊರೆಯಲಿಲ್ಲ ಎಂದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲೋಕೋಶ್ ನಾಯ್ಕ ಅವರು ಈಗ ಬಿಜೆಪಿ ಸೇರಿದ್ದು ಬಹುತೇಕ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದೆ.
ಕಳೆದ ಬಾರಿ ಮತಗಳು ಕಾಂಗ್ರೆಸ್, ಜೆಡಿಎಸ್, ಬಂಡಾಯ ಅಭ್ಯರ್ಥಿಗಳಿಂದ ಹರಿದು ಹಂಚಿಹೋಗಿ ಗೋಪಾಲಕೃಷ್ಣ ಅವರು ಆಯ್ಕೆಯಾಗಿದ್ದರು. ಈ ಬಾರಿ ಅವರಿಲ್ಲ.
ಶ್ರೀನಿವಾಸ್ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ನೇರ ಸ್ಪರ್ಧೆ ಆಗಬಹುದು. ಬಿಜೆಪಿ ಟಿಕೆಟ್ ದೊರೆಯದಿದ್ದರೆ ಬಂಗಾರು ಹನುಂಮತ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.