
ಕೂಡ್ಲಿಗಿ. ಸೆ.5 :- ಪಟ್ಟಣದ ಎಸ್‌ಬಿಐ ಶಾಖೆಗೆ ಸೋಮವಾರ ಭೇಟಿ ನೀಡಿದ್ದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಗ್ರಾಹಕರಿಗೆ ಆಗುವ ತೊಂದರೆಗಳ ಬಗ್ಗೆ ಶಾಖೆಯ ವ್ಯವಸ್ಥಾಪಕ ಕುಮಾರ್ ಕುಶಾಂತ್ ಜತೆ ಚರ್ಚೆ ನಡೆಸಿದರು.
ಸರಕಾರದ ನಾನಾ ಯೋಜನೆಗಳಡಿ ಫಲಾನುಭವಿಗಳಾಗಿರುವ ವೃದ್ಧರು, ಮಹಿಳೆಯರು, ಗರ್ಭಿಣಿಯರು ಸೇರಿ ಹೆಚ್ಚಿನ ಗ್ರಾಹಕರಿದ್ದರೂ, ಸೂಕ್ತವಾಗಿ ಬ್ಯಾಂಕ್ ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿವೆ. ಹಾಗಾಗಿ, ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳುವ ಮೂಲಕ ಹೆಚ್ಚುವರಿ ಕೌಂಟರ್‌ಗಳನ್ನು ತೆರೆದು ಗ್ರಾಹಕರಿಗೆ ಹಾಗೂ ವಾಣಿಜ್ಯ ಪಟ್ಟಣವಾಗಿರುವ ತಾಲೂಕಿನ ಕಾನಹೊಸಹಳ್ಳಿಯಲ್ಲಿ ಎಸ್‌ಬಿಐ ನೂತನ ಶಾಖೆ ತೆರೆಯುವುದು, ತಾಲೂಕಿನ ನಾನಾ ಕಡೆ ಬ್ಯಾಂಕ್ ಸೇವಾ ಕೇಂದ್ರಗಳನ್ನು ಆರಂಭಿಸುವ ಮೂಲಕ ಆ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು. ಈ ಬಗ್ಗೆ ಎಸ್‌ಬಿಐ ಮ್ಯಾನೇಜರ್ ಕುಮಾರ್ ಕುಶಾಂತ್ ಅವರು ಮಾತನಾಡಿ, ಕಾನಹೊಸಹಳ್ಳಿಯಲ್ಲಿ ಶಾಖೆ ಆರಂಭಿಸುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಪಟ್ಟಣದಲ್ಲಿನ ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಸ್ಪಂದಿಸುವಂತೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಕಾವಲ್ಲಿ ಶಿವಪ್ಪ ನಾಯಕ, ಶಾಸಕರ ಆಪ್ತ ಸಹಾಯಕ ಮರುಳಸಿದ್ದಪ್ಪ, ಮುಖಂಡರಾದ ಟಿ.ಜಿ.ಮಲ್ಲಿಕಾರ್ಜುನಗೌಡ, ಕೆ.ಎನ್.ದಿನಕರ ಸೇರಿ ಇತರರಿದ್ದರು.