ಕೂಡ್ಲಿಗಿ : ಅಪರಿಚಿತ ವಾಹನ ಡಿಕ್ಕಿ – ಕರಡಿ ಸಾವು

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ.21 :-  ಹೈವೇ ರಸ್ತೆ ದಾಟಲು ಹೋದ ಕರಡಿಯೊಂದು ಅಪರಿಚಿತ ವಾಹನಡಿಕ್ಕಿಯಿಂದ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಸುಕಿನ ಜಾವ ಕೂಡ್ಲಿಗಿ ಸಮೀಪದ  ಮೊರಬ ಕ್ರಾಸ್ ಬಳಿ ಜರುಗಿದ್ದು ಈ ವರ್ಷದ  ಹೈವೇ ರಸ್ತೇಲಿ  ಇದು ಮೂರನೇ ಕರಡಿಯ ಬಲಿಯಾಗಿದೆ.   
ಮೊರಬ ಕ್ರಾಸ್ ನ  ಅಮ್ಮನಕೇರಿ ಮಂಜುನಾಥನ ಪೌಲ್ಟ್ರಿ ಕೋಳಿ ಫಾರಂ ಹತ್ತಿರ ಇಂದು ನಸುಕಿನ ಜಾವ ಅಪರಿಚಿತ ವಾಹನ ಡಿಕ್ಕಿಯಿಂದ ರಸ್ತೆದಾಟುತಿದ್ದ 8ರಿಂದ 10ರ  ವಯಸ್ಸಿನ ಹೆಣ್ಣು ಕರಡಿಯೊಂದು  ಡಿಕ್ಕಿಯಾದ ಸ್ಥಳದಲ್ಲೇ ಸಾವನ್ನಪ್ಪಿದೆ. ಬಹುಷಃ ಆಹಾರ ಹುಡುಕಿಕೊಂಡ ಮೊರಬ ಕಡೆಯ ಗುಡ್ಡಗಳತ್ತ  ಹೋಗಲು ಮುಂದಾಗಿ ರಸ್ತೆ ದಾಟುವಾಗ  ವಾಹನ ಡಿಕ್ಕಿಯಿಂದ ಈ ದುರ್ಘಟನೆ ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ.   ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿ ಕರಡಿಯ ಮೃತದೇಹವನ್ನು ಕೂಡ್ಲಿಗಿ ಅರಣ್ಯ ಇಲಾಖೆಯ ಹಿಂದುಗಡೆ ಪಶುವೈದ್ಯಾಧಿಕಾರಿಗಳಿಂದ ಶವಪರೀಕ್ಷೆ ನಡೆಸಿ  ನಂತರ ಕೂಡ್ಲಿಗಿ ಎಸಿಎಫ್ ಕಂಠೇಪ್ಪ,  ಕೂಡ್ಲಿಗಿ ವಲಯಾರಣ್ಯಾಧಿಕಾರಿ ಮಂಜುನಾಥ, ಕುಬೇರ, ಗೋವಿಂದಪ್ಪ ಹಾಗೂ ಸಿಬ್ಬಂದಿಗಳು ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಸಿದರು.                                                   ವನ್ಯಜೀವಿಗಳ ರಕ್ಷಣೆಗೆ ಹೈವೇಯಲ್ಲಿ ನಾಮಫಲಕ  :  ಆಹಾರ ಹುಡುಕಿಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರಸ್ತೆ ದಾಟುವ ಸಂದರ್ಭದಲ್ಲಿ ವನ್ಯಜೀವಿಗಳ ಮೇಲೆ ವಾಹನಗಳು ಹರಿದುಹೋಗುತ್ತಿದ್ದು ಹೆಚ್ಚಿನ ಸಾವು ನೋವುಗಳು ಸಂಭವಿಸುತ್ತಿರುವ ನಿಟ್ಟಿನಲ್ಲಿ ಹಾಗೂ ಕೂಡ್ಲಿಗಿ ತಾಲೂಕಿನಲ್ಲಿ ಹಾದುಹೋಗಿರುವ ಹೈವೇ ರಸ್ತೆಯಲ್ಲಿ ಇದೇ ವರ್ಷದಲ್ಲಿ ಅಮಲಾಪುರ ಸಮೀಪ, ಕರೆಕಲ್ಲು ಬಗಡಿಯ ಪೆಟ್ರೋಲ್ ಬಂಕ್  ಸಮೀಪ ಹಾಗೂ ಇಂದು ನಸುಕಿನ ಜಾವ  ಮೊರಬ ಕ್ರಾಸ್ ಬಳಿಯ ಹೈವೇ ರಸ್ತೇಲಿ ವಾಹನಗಳ ಡಿಕ್ಕಿಯಿಂದ ಈ ವರ್ಷದಲ್ಲೇ 3  ಕರಡಿಗಳು  ಸಾವನ್ನಪ್ಪಿವೆ,  ಕಳೆದ ಹಾಗೂ ಹಿಂದಿನ ವರ್ಷದಲ್ಲಿ ಬೋರಾಗಟ್ಟ ಕ್ರಾಸ್ ಹತ್ತಿರ,  ಸಿದ್ಧಯ್ಯನಗುಡ್ಡದ ಸೊಲ್ಲಮ್ಮದೇವಿ ಮರಗಳ ಬಳಿ ಕರಡಿಗಳು ಸಾವನ್ನಪ್ಪುತ್ತಿದ್ದು ಏಷ್ಯಾಖಂಡದ ಎರಡನೇ ಕರಡಿಧಾಮದ ಕರಡಿಗಳ ಸಂತತಿ ಕಡಿಮೆಯಾಗುವತ್ತ ಸಾಗುತ್ತಿದ್ದು ಇದಕ್ಕೆ ಅರಣ್ಯಾಧಿಕಾರಿಗಳ ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತೆವಹಿಸಿ  ಕರಡಿ ಸಂತತಿ ಉಳಿಸಲು ಕರಡಿಗಳು ರಸ್ತೆ,  ರೈತರ ಹೊಲಗಳಿಗೆ ಬರದಂತೆ ಅರಣ್ಯದಲ್ಲೇ ಆಹಾರ ಸಿಗುವಂತೆ ವ್ಯವಸ್ಥೆ ಮಾಡಲು ಮುಂದಾಗಬೇಕಿದೆ   ಮತ್ತು ಹುಲಿಕೆರೆ ಕ್ರಾಸ್ ಬಳಿ ನವಿಲು ಸೇರಿದಂತೆ ಇತರೆ ಪ್ರಾಣಿ ಪಕ್ಷಿಗಳ ಸಾವು ನೋವುಗಳು ಕಂಡು ಬರುತ್ತಿದ್ದು ಗಾಯಗೊಂಡ ನವಿಲು ಮತ್ತು ಇತರೆ ಪ್ರಾಣಿಗಳನ್ನು ಹೆದ್ದಾರಿ ಸಹಾಯಕರು ಚಿಕಿತ್ಸೆ ಮಾಡಿ ಅರಣ್ಯದ ಕಡೆಗೆ ಬಿಟ್ಟಿದ್ದಾರೆ ಈ ಹಿನ್ನೆಲೆಯಲ್ಲಿ ಹೈವೆಗಳಲ್ಲಿ ವಾಹನ ವೇಗದ ಮಿತಿ ಕಡಿಮೆ ಮಾಡಿ  ಸಂಚಾರ ಮಾಡುವ ಮೂಲಕ ರಸ್ತೆದಾಟುವ ವನ್ಯಜೀವಿ ಪ್ರಾಣಿಸಂಕುಲ ರಕ್ಷಿಸುವಲ್ಲಿ ಹೈವೇ ರಸ್ತೆಯ ಇಕ್ಕೆಲಗಳಲ್ಲಿ ರಾತ್ರಿ ಸಂಚರಿಸುವ ವಾಹನಗಳಿಗೂ  ಕಣ್ತೆರೆಯುವ ಹಾಗೆ ನಾಮಫಲಕ ಹಾಕುವಲ್ಲಿ ಮೇಲಧಿಕಾರಿಗಳು ತೀರ್ಮಾನಿಸುತ್ತಿದ್ದು ನಂತರ ನಾಮಫಲಕ ಹಾಕಲಾಗುವುದೆಂದು ಕೂಡ್ಲಿಗಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.