ಕೂಡ್ಲಿಗಿಯ ಇಬ್ಬರು ಸಾಧಕರಿಗೆ ತಾಲೂಕು ಆಡಳಿತದಿಂದ ಗೌರವ ಸನ್ಮಾನ.

                                                                                      ಕೂಡ್ಲಿಗಿ.ನ.12 :- ಪಟ್ಟಣದಲ್ಲಿ ಮಾಜಿ ದೇವದಾಸಿಯರ ಸ್ವಾವಲಂಬನಾ ಕೇಂದ್ರ ತೆರೆದು ಶೇಂಗಾ ಚಿಕ್ಕಿ ಘಟಕ ಸ್ಥಾಪಿಸಿದ ಕೇಂದ್ರದ ಅಧ್ಯಕ್ಷೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಹಾಗೂ ಕೂಡ್ಲಿಗಿ ಸರ್ಕಾರಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಯುವಕ ದೇಶದ ಪ್ರತಿಷ್ಠಿತ ಐ ಐ ಟಿ ಪರೀಕ್ಷೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಕೂಡ್ಲಿಗಿ ತಾಲೂಕಿಗೆ ಕೀರ್ತಿ ತಂದ ಇಬ್ಬರು ಸಾಧಕರಿಗೆ ಕೂಡ್ಲಿಗಿ ತಾಲೂಕು ಆಡಳಿತವತಿಯಿಂದ ಮಂಗಳವಾರ ಸಂಜೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.                                                                           ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವದಾಸಿ ಸ್ವಾವಲಂಬನಾ ಕೇಂದ್ರದ ಅಧ್ಯಕ್ಷೆ ಕನಕೇರಿ ವೆಂಕಮ್ಮ ಮಾತನಾಡಿ ಮಾಜಿ ದೇವದಾಸಿಯರ 15 ಜನರ ಗುಂಪುಕಟ್ಟಿ ಸ್ವಾವಲಂಬಿ ಜೀವನದ ಬದುಕು ಕಟ್ಟಿಕೊಳ್ಳಲು ಶೇಂಗಾ ಚಿಕ್ಕಿ ಘಟಕ ಸ್ಥಾಪಿಸಿ ಆರಂಭದಲ್ಲಿ ಸ್ವಲ್ಪ ಕಷ್ಟ ಅನಿಸಿದ್ದು ನಿಜ ಅಂದು ಆಗದು ಎಂದು ಕೈಕಟ್ಟಿ ಕುಳಿತಿದ್ದರೆ ಇಂದು ರಾಜ್ಯದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯಂತಹ ಗೌರವಕ್ಕೆ ಅರ್ಹರಾಗುತ್ತಿರಲಿಲ್ಲ ನಮ್ಮ ಶ್ರಮ ನಮ್ಮ ಬದುಕಿಗೆ ದಾರಿ ತೋರಿಸುತ್ತದೆ ಎನ್ನುವುದಕ್ಕೆ ನಮ್ಮ ಸ್ವಾವಲಂಬನಾ ಕೇಂದ್ರವೇ ಉದಾಹರಣೆ  ಎಂದರು ಸಣ್ಣದಾಗಿ ಪ್ರಾರಂಭಿಸಲಾದ ಚಿಕ್ಕಿ ಘಟಕ ರಾಜ್ಯ ಮಟ್ಟದವರೆಗೆ ಹೆಸರಾಗಿದ್ದು ಬರೀ ಕೂಡ್ಲಿಗಿ ತಾಲೂಕಿನ ಅಂಗನವಾಡಿಗಳಿಗೆ ಸರಬರಾಜು ಇತ್ತು ಈಗ ಇಡೀ ಜಿಲ್ಲೆಯಲ್ಲಿ ಚಿಕ್ಕಿಯ ಬೇಡಿಕೆ ಇದೆ ಅದಕ್ಕೆ ಚಿಕ್ಕಿ ತಯಾರಿಸುವ ಯಂತ್ರಕ್ಕೆ ಸಾಲ ಸೌಲಭ್ಯ ನೀಡಿದಲ್ಲಿ ಇನ್ನಷ್ಟು ದೇವದಾಸಿಯರ ಬದುಕು ಕಟ್ಟಿಕೊಟ್ಟಂತಾಗುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕನಕೇರಿ ವೆಂಕಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.                                                                         ಮತ್ತೋರ್ವ ಸಾಧಕ ಕೂಡ್ಲಿಗಿ ಕಾಲ್ಚಟ್ಟಿ ಮನೆತನದ ಯುವಕ ಗೋವಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಸರ್ಕಾರಿ ಶಾಲೆ ಎಂದರೆ ಮೂಗುಮುರಿಯುವ ಈ ದಿನದ ಜನತೆಗೆ ನಮ್ಮ ಮನೆಯಲ್ಲಿ ಕೃಷಿ ಕುಟುಂಬದಲ್ಲಿ ರಮೇಶ ನಾಗರತ್ನ ದಂಪತಿ ಮಗನಾಗಿ ಸರ್ಕಾರಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಯಾವುದೇ ಕೋಚಿಂಗ್ ಇಲ್ಲದೆ ದೇಶದ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ ಮೊದಲ ಹಂತದ ಪರೀಕ್ಷೆಯಲ್ಲಿ ಪಾಸಾಗಿದ್ದು ಸರ್ಕಾರಿ ವಸತಿ ಶಾಲೆ ನನ್ನ ಪಾಲಿನ ದಾರಿದೀಪವಾಗಿದೆ ಸರ್ಕಾರಿ ಶಾಲೆ  ಎಂಬ ಕೀಳಿರಿಮೆ ಮಾಡದೇ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಲು ಮುಂದಾಗಬೇಕಿದೆ ಎಂದು ಸಾಧಕ ಕಾಲ್ಚಟ್ಟಿ ಗೋವಿಂದ ಸಾಧನೆ ಬಗ್ಗೆ ತಿಳಿಸಿದರು.                                                            ತಾಲೂಕು ಆಡಳಿತದ ತಹಸೀಲ್ದಾರ್ ಮಹಾಬಲೇಶ್ವರ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಬಸಣ್ಣ ಮಾತನಾಡಿ ಇಬ್ಬರು ಸಾಧಕರು ನಮ್ಮ ಕೂಡ್ಲಿಗಿ ತಾಲೂಕಿಗೆ ಕೀರ್ತಿ ತಂದವರಾಗಿದ್ದು ಇಂತಹ ಸಾಧಕರಂತೆ ಹೆಚ್ಚು ಹೆಚ್ಚು ಸಾಧಕರು ನಮ್ಮ ತಾಲೂಕಿನಲ್ಲಿ ಸಾಧನೆ ಮಾಡಲಿ ಎಂದು ಸಾಧಕರಿಗೆ ಶುಭ ಹಾರೈಸಿ ಗೌರವ ಸನ್ಮಾನ ನೆರವೇರಿಸಿದರು.  ತಾಲೂಕು ಕಚೇರಿಯ ಸಿಬ್ಬಂದಿ ಈಶಪ್ಪ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿ ವಂದಿಸಿದರು.               ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಅರುಂಧತಿ ನಾಗಾವಿ ಸೇರಿದಂತೆ ಇತರೆ ಸಿಬ್ಬಂದಿಗಳು ಹಾಗೂ ಸಾಧಕರ ಕುಟುಂಬ ವರ್ಗದವರು ಹಾಜರಿದ್ದರು.