ಕೂಡ್ಲಿಗಿಯಲ್ಲಿ ಶ್ರೀಕೊತ್ತಲಾಂಜನೇಯ ಸ್ವಾಮಿ ರಥೋತ್ಸವ.ಜನಸಾಗರ

.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ.18 :- ಶ್ರೀರಾಮ ನವಮಿ ದಿನದಂದು ಪಟ್ಟಣದ ಆರಾಧ್ಯ ದೈವ ಶ್ರೀ ಕೊತ್ತಲಾಂಜನೇಯ ಸ್ವಾಮಿ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಜೆ  ಅದ್ದೂರಿಯಾಗಿ ನೆರವೇರಿತು.
ಪಟ್ಟಣದ ಶ್ರೀ ಕೊತ್ತಲಾಂಜನೇಯ ಸ್ವಾಮಿಯ ದೇವಸ್ಥಾನದಿಂದ ರಥದವರೆಗೆ ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಆಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ಪೂಜಾ ವಿಧಿ ವಿಧಾನಗಳನ್ನು ಮಾಡಲಾಯಿತು. ನಂತರ ನಡೆದ ಪಟ ಹರಾಜಿನಲ್ಲಿ ಕೂಡ್ಲಿಗಿಯ ಯುವ ಉದ್ಯಮಿ ಎನ್ .ಬಿ.ಸುನಿಲ್ ಕುಮಾರ್ ಎನ್ನುವವರು  ಪಟವನ್ನು ಈ ಬಾರಿ ದಾಖಲೆ ಎಂಬಂತೆ  8,01,101ರೂ.(ಎಂಟು ಲಕ್ಷದ ಒಂದು ಸಾವಿರದ ಒಂದು ನೂರಾ ಒಂದು ರೂ )ಗೆ  ಪಡೆದುಕೊಂಡರು.ಈ ಹಿಂದೆ ಶ್ರೀ ಸ್ವಾಮಿಯ  ಪಟ ಹರಾಜನ್ನು ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು 2,60,101ರೂ ಗೆ ಮಾಡಿಕೊಂಡಿದ್ದು ಹೆಚ್ಚಾಗಿತ್ತು ಆದರೆ ದೇವರ ಕೃಪೆ ಎಂಬಂತೆ ಈ ಬಾರಿಯ ಹರಾಜು ಭಕ್ತರ ಪೈಪೋಟಿಯಲ್ಲಿ ಎಂಟು ಲಕ್ಷ ರೂ ವರೆಗೆ ಕೂಗಿದ್ದು ವಿಶೇಷ ಎನಿಸಿತು. ಹರಾಜಿನ ನಂತರ ಭಕ್ತರು ಜೈ ಶ್ರೀರಾಮ್, ಜೈ ಹನುಮಾನ್ ಎಂದು ಘೋಷಣೆ ಕೂಗುವ ಮೂಲಕ ರಥವನ್ನು ಎಳೆದರು. ಪಟ್ಟಣದ ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನದಿಂದ ಪಾದಗಟ್ಟೆಯವರೆಗೆ ರಥವನ್ನು ಎಳೆಯಲಾಯಿತು. ಭಕ್ತರು ಬಾಳೆಹಣ್ಣು ಎಸೆದು  ರಥದ ಗಾಲಿಗೆ ತೆಂಗಿನಕಾಯಿ ಹೊಡೆದು ಭಕ್ತರು  ಭಕ್ತಿಯನ್ನು  ಸಮರ್ಪಿಸಿದರು.
ಈ ರಥೋತ್ಸವ ಕಾರ್ಯಕ್ರಮದಲ್ಲಿ ಕೂಡ್ಲಿಗಿ  ಶಾಸಕ ಡಾ. ಶ್ರೀನಿವಾಸ ಎನ್ ಟಿ , ಬಿಜೆಪಿ ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಸೇರಿದಂತೆ ಕೂಡ್ಲಿಗಿ ಪಟ್ಟಣ ಪಂಚಾಯತಿ ಸದಸ್ಯರು ಸೇರಿದಂತೆ ದೇವಸ್ಥಾನದ ದೈವಸ್ಥರು, ಮುಖಂಡರು ಭಾಗವಹಿಸಿದ್ದರು.
ರಥೋತ್ಸವದಲ್ಲಿ ಕೂಡ್ಲಿಗಿ, ಶಿವಪುರ, ಬಡೇಲಡುಕು, ಈಚಲಬೊಮ್ಮನಹಳ್ಳಿ, ಜಂಗಮಸೋವೇನಹಳ್ಳಿ, ಮೊರಬ, ಮರಬನಹಳ್ಳಿ, ವಿರುಪಾಪುರ, ಕಕ್ಕುಪ್ಪಿ, ಗೋವಿಂದಗಿರಿ, ಚೋರನೂರು ಸೇರಿ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ ಜಿಲ್ಲೆಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು. ರಥೋತ್ಸವಕ್ಕೂ ಮುನ್ನ ದೇವಸ್ಥಾನದಲ್ಲಿ ಸ್ವಾಮಿಯ ಉತ್ಸವಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಪಾರ ಭಕ್ತರು ಸೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಪುನೀತರಾದರು. ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ, ವಿಧಾನಗಳು ನೆರವೇರಿದವು. ರಥೋತ್ಸವದ ಸಂದರ್ಭದಲ್ಲಿ ಮಳೆಯ ಸಿಂಚನವಾಗಿದ್ದು, ಶುಭ ಸೂಚಕವೆಂದು ಭಕ್ತರು ಹರ್ಷ ವ್ಯಕ್ತಪಡಿಸಿದರು.
ಕೂಡ್ಲಿಗಿ ಪಟ್ಟಣದ ಆರಾಧ್ಯ ದೈವ ಶ್ರೀ ಕೊತ್ತಲಾಂಜನೇಯ ಸ್ವಾಮಿಗೆ ಎಲ್ಲಾ ವರ್ಗದ ಭಕ್ತರು ಪೂಜೆ ಸಲ್ಲಿಸುತ್ತಾರೆ. ಅಲ್ಲದೆ, ಪ್ರತಿವರ್ಷ ಶ್ರೀರಾಮ ನವಮಿ ದಿನದಂದು ಪಟ್ಟಣದಲ್ಲಿ ಶ್ರೀ ಕೊತ್ತಲಾಂಜನೇಯ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ನಡೆಯಲಿದ್ದು, ಲಕ್ಷಾಂತರ ಭಕ್ತರು ಭಾಗವಹಿಸುವ ಮೂಲಕ ಭಕ್ತಿ ಸಮರ್ಪಿಸುವರು. ಕೊತ್ತಲಾಂಜನೇಯ ಸ್ವಾಮಿ ರಥೋತ್ಸವವು ಭಾವೈಕ್ಯತೆಯ ಸಂದೇಶವೆಂಬಂತೆ ಆಚರಿಸುವುದು ವಿಶೇಷವಾಗಿದೆ. ಬೇಡಿದವರಿಗೆ ಇಷ್ಟಾರ್ಥಗಳನ್ನು ಕರುಣಿಸುವಂಥ ಕೊತ್ತಲಾಂಜನೇಯ ಸ್ವಾಮಿಗೆ ಪ್ರತಿದಿನ ಪೂಜೆ ನೆರವೇರಲಿದ್ದು, ಪ್ರತಿ ಶನಿವಾರ ವಿಶೇಷ ಅಲಂಕಾರ, ಪೂಜೆ ನಡೆಯಲಿದೆ.
– ಕಾವಲಿ ಶಿವಪ್ಪನಾಯಕ, ಪಪಂ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು, ಕೂಡ್ಲಿಗಿ.