
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ. 22 :- ತಿಂಗಳ ಉಪವಾಸ ಮುಗಿಸಿದ ಮುಸ್ಲಿಂ ಭಾಂಧವರು ಇಂದು ಪವಿತ್ರ ರಂಜಾನ್ ಹಬ್ಬದ ಸಡಗರದಲ್ಲಿ ತೊಡಗಿದ್ದು ಕೊಟ್ಟೂರು ರಸ್ತೆಯಲ್ಲಿರುವ ಎರಡು ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮಗುರುಗಳಾದ ಮೌಲಿಗಳು ಮಾತನಾಡಿ ಎಲ್ಲರೂ ಪ್ರಜಾಪ್ರಭುತ್ವದ ಮತದಾನದ ಹಕ್ಕನ್ನು ತಪ್ಪದೆ ಚಲಾಯಿಸಿ ಉತ್ತಮ ವ್ಯಕ್ತಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸಂದೇಶ ಸಾರಿದರು.
ಇಂದು ಬೆಳಿಗ್ಗೆ ಪಟ್ಟಣದ ಈದ್ಗಾಕ್ಕೆ ಹಿರಿಯರು ಕಿರಿಯರು ಎನ್ನದೆ ಸಾಮೂಹಿಕವಾಗಿ ಪಟ್ಟಣದಿಂದ ಸಾಗುವ ಮೂಲಕ ಎರಡು ಈದ್ಗಾಗಳಲ್ಲಿ ಮುಸ್ಲಿಂ ಭಾಂಧವರು ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರರೂ ಮಂದಿ ಭಾಗಿಯಾಗಿದ್ದರು. ಕೆಲವರು ವೃದ್ದರು, ಹೆಣ್ಣು ಮಕ್ಕಳು ಮನೆಯಲ್ಲಿ ರಂಜಾನ್ ಹಬ್ಬದ ಪ್ರಾರ್ಥನೆಯಲ್ಲಿ ತೊಡಗಿದ್ದರು.
ಸಂದೇಶ : ಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು ಉತ್ತಮ ಆಯ್ಕೆ ಮಾಡಿಕೊಳ್ಳಲು ನೀವು ಹಾಕುವ ಒಂದು ಮತ ಅತ್ಯಮೂಲ್ಯವಾಗಿದೆ ಆ ಹಕ್ಕನ್ನು ತಪ್ಪದೆ ಚಲಾಯಿಸಿ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ತಿಳಿಸಿದ ಮೌಲಿಗಳು ತಂದೆ ತಾಯಿ ಗುರುಗಳನ್ನು ಗೌರವಿತವಾಗಿ ಕಾಣಿ ಅವರ ಆಶೀರ್ವಾದ ನಿಮ್ಮ ಮೇಲಿರಲಿ ವಿದ್ಯಾವಂತರಾಗಿ ಅದರ ಜೊತೆಗೆ ಸಂಸ್ಕಾರವಂತರಾಗಿ ಜೀವನ ಸಾಗಿಸಿ ಎಂದರು ಹಾಗೂ ಭಾರತೀಯರಾದ ನಾವೆಲ್ಲರೂ ಒಂದೇ ಯಾವುದೇ ಕೋಮುಗಲಭೆಗೆ ಆಸ್ಪದವಾಗದಂತೆ ಮನುಷ್ಯರಾಗಿ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಜೀವನ ಸಾಗಿಸಿ ಎಂದು ಧರ್ಮಗುರುಗಳು ಧರ್ಮೋಪದೇಶ ಮಾಡಿದರು ಮತ್ತು ರಂಜಾನ್ ಕುರಿತು ಹಿತವಚನ ನೀಡಿದರು. ಪರಸ್ಪರ ಅಪ್ಪುಗೆ ಮೂಲಕ ಹಬ್ಬದ ಶುಭಾಶಯ ಕೋರಿದರು. ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದರು.