ಕೂಡ್ಲಿಗಿಯಲ್ಲಿ ಬಿ.ಎಸ್ಸಿ ಕೋರ್ಸ್ ಆರಂಭಬಹು ವರ್ಷಗಳ ಕನಸು ನನಸು. ಶಾಸಕರ ಕಾರ್ಯ ಶ್ಲಾಘನೀಯ.


ಬಿ ನಾಗರಾಜ. ಕೂಡ್ಲಿಗಿ
ಕೂಡ್ಲಿಗಿ. ಜು 12 :-  ಹಿಂದುಳಿದ ತಾಲೂಕಿನಲ್ಲಿ  ಬಡ ಮಕ್ಕಳ  ಪಾಲಿಗೆ ಗಗನಕುಸುಮವಾಗಿದ್ದ ಬಿ ಎಸ್ಸಿ ಕೋರ್ಸ್ ಆರಂಭ ಮಾಡಬೇಕೆಂಬ ಬಹು ವರ್ಷಗಳ ಕನಸು ಈಗ ನನಸಾಗಿದ್ದು ರಾಜ್ಯದ ಅತ್ಯಂತ ಹಿಂದುಳಿದ ಎರಡನೇ ದೊಡ್ಡ ತಾಲೂಕಾಗಿರುವ  ಕೂಡ್ಲಿಗಿಯಲ್ಲಿ   ಎಸ್‌ಎವಿಟಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ ಕೋರ್ಸ್ ಹಾಗೂ ಇತರೆ ಕೋರ್ಸ್ ಗಳ    ಆರಂಭಕ್ಕೆ ಸೋಮವಾರ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಬಹು ವರ್ಷಗಳ ಕನಸು ಈಡೇರಿದಂತಾಗಿದೆ. ಬಡವರ ಪಾಲಿಗೆ ಜ್ಞಾನದ ಬಂಡಾರ ತೆರೆದಂತಾಗಿದೆ. ಈ ಉತ್ತಮ ಕಾರ್ಯ ನಿರ್ವಹಿಸಿದ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಹಾಗೂ ಕಾಲೇಜಿನ ಪ್ರಾಚಾರ್ಯ ಕಲ್ಲಪ್ಪ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದೆ.
ಈಗಿನ ಕೂಡ್ಲಿಗಿ ಶಾಸಕರಾಗಿರುವ ಡಾ ಶ್ರೀನಿವಾಸ ಅವರ ತಂದೆ ಈ ಹಿಂದೆ 1984ರಲ್ಲಿ ಶಾಸಕರಾಗಿದ್ದ ಎನ್.ಟಿ.ಬೊಮ್ಮಣ್ಣ ಅವರ ಅಧಿಕಾರವಧಿಯಲ್ಲಿ ಭೂದಾನಿ ಅಂಗಡಿ ಸಿದ್ದಣ್ಣ ಅವರ ಶಿಕ್ಷಣ ಪ್ರೇಮದಲ್ಲಿ ನಿವೇಶನ ನೀಡಿದಂತೆ  ಪಟ್ಟಣದಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜು ಆರಂಭವಾಗಿದ್ದರೂ, ಆಗಿನಿಂದಲೂ ಬಿ.ಎ, ಮೊದಲಾಗಿ ನಂತರ ಇತ್ತೀಚಿನ ಕೆಲ ವರ್ಷದಿಂದ  ಬಿ.ಕಾಂ ವಿದ್ಯಾಭ್ಯಾಸಕ್ಕೆ ಮಾತ್ರ ಅವಕಾಶವಿತ್ತು. ಆದರೆ, ಪಿಯುಸಿಯಲ್ಲಿ ವಿಜ್ಞಾನ ವಿಷಯ ಪಡೆದು ತೇರ್ಗಡೆಯಾದ ತಾಲೂಕಿನ ಅದೆಷ್ಟೋ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ ಸೇರಲು ಖಾಸಗಿ ಶಾಲೆಗಳ ಡೊನೆಷನ್ ಹಾವಳಿಯಲ್ಲಿ ಬಡ ಮಕ್ಕಳಿಗೆ  ಅವಕಾಶವೇ ಇರಲಿಲ್ಲವಾಗಿದ್ದು ಬಿಎಸ್ಸಿ ಕೋರ್ಸ್ ಬಡವರ ಪಾಲಿಗೆ ಗಗನ ಕುಸುಮವಾಗಿತ್ತೇoದರೆ ತಪ್ಪಾಗದು. ಇದನ್ನರಿತ ಕಾಲೇಜಿನ ಪ್ರಾಚಾರ್ಯ ಕಲ್ಲಪ್ಪ ಎನ್  ಹಾಗೂ ಉಪನ್ಯಾಸಕ ವರ್ಗದವರು ಕಾಳಜಿವಹಿಸಿ ಕಳೆದ ಬಾರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರಿಗೆ ನ್ಯಾಕ್ ನಿಂದ ಬಿ ಪ್ಲಸ್ ಮಾನ್ಯತೆ ಪಡೆದಾಗ ಬಿ ಎಸ್ಸಿ ಕೊರ್ಸಿನ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು ಅಂದಿನ ಶಾಸಕರು ಸಹ ಕೊರ್ಸಿನ ವಿಚಾರ ಕುರಿತು ನ್ಯಾಕ್ ಸಮಿತಿಗೆ ತಿಳಿಸಿದ್ದರು ಚುನಾವಣೆ ನಂತರ ಕ್ಷೇತ್ರದ ಶಾಸಕರು ಬದಲಾದ ನಂತರ  ಈಗ  ಹಾಲಿ ಶಾಸಕ ಡಾ ಶ್ರೀನಿವಾಸ ಅವರ ಗಮನಕ್ಕೆ ತರುವ ಮೂಲಕ ಬಡವರ ಪಾಲಿಗೆ ಗಗನ ಕುಸುಮವಾಗಿದ್ದ ಬಿ ಎಸ್ಸಿಯನ್ನು ತರುವ ಪ್ರಯತ್ನ ಮಾಡಲಾಯಿತು ಕ್ಷೇತ್ರದ ಮಕ್ಕಳ ಶೈಕ್ಷಣಿಕ ಮಟ್ಟ ಹೆಚ್ಚಿಸುವ ಕುರಿತು ಕಾಳಜಿ ವಹಿಸಿಕೊಂಡಿರುವ ಶಾಸಕರ ನಿರಂತರ ಪ್ರಯತ್ನದ  ಫಲದಿಂದಾಗಿ  ಈಗ, ಬಿಎಸ್ಸಿ ಕೋರ್ಸ್ ಆರಂಭಕ್ಕೆ ಕಾಲೇಜು ಶಿಕ್ಷಣ ಇಲಾಖೆಯಿಂದ ಅನುಮೋದನೆ ದೊರೆತಿರುವುದರಿಂದ ಹೆಚ್ಚಿನ ತಾಲೂಕಿನ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾದಂತಾಗಿದೆ.
ಪಟ್ಟಣದ ಎಸ್‌ಎವಿಟಿ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ರಾಷ್ಟ್ರೀಯ  ಮಾನ್ಯತೆ ಮತ್ತು ಮೌಲ್ಯ ಮಾಪನ ಸಂಸ್ಥೆ (ನ್ಯಾಕ್)ಯಿಂದ 2022ರ ಡಿಸೆಂಬರ್‌ನಲ್ಲಿ ‘ಬಿ ಪ್ಲಸ್’ ಗ್ರೇಡ್ ದೊರೆತಿದೆ. ಅಲ್ಲದೆ, ಬಿ.ಎಸ್ಸಿ ಕೋರ್ಸ್ ಆರಂಭಿಸಲು ಕೊಠಡಿಗಳು ಸೇರಿ ಮೂಲಸೌಕರ್ಯವೂ ಇದೆ. ಹಾಗಾಗಿ, 2023-24ನೇ ಸಾಲಿನಲ್ಲೇ ಪ್ರಥಮ ವರ್ಷದ ಬಿ.ಎಸ್ಸಿ ಸೇರುವ ವಿದ್ಯಾರ್ಥಿಗಳಿಗೆ ಈಗ ವರ ಸಿಕ್ಕಂತಾಗಿದೆ. ಬಿ.ಎಸ್ಸಿ ಕೋರ್ಸ್ನಲ್ಲಿ ಭೌತಶಾಸ್ತ್ರ , ಗಣಿತ, ರಸಾಯನ ಶಾಸ್ತ್ರ, ಕಂಪ್ಯೂಟರ್ ಸೈನ್ಸ್   ವಿಷಯಗಳಿಗೆ ಈಗ ಅವಕಾಶ ದೊರೆತಿದೆ. ಇದರ ಜತೆ ಹೊಸದಾಗಿ ಪತ್ರಿಕೋದ್ಯಮ, ಐಚ್ಛಿಕ ಇಂಗ್ಲಿಷ್ ಕಲಿಕಾ ವಿಷಯಗಳು ಆರಂಭಿಸಲು ಹಸಿರು ನಿಶಾನೆ ಸಿಕ್ಕಿರುವುದು ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. 
ಕಾಲೇಜು ವಿಸ್ತರಣೆ:
ಕೂಡ್ಲಿಗಿ ಎಸ್‌ಎವಿಟಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬಿ.ಎ ಕೋರ್ಸ್ಗೆ ಒಟ್ಟು 1019 ಹಾಗೂ ಬಿ.ಕಾಂಗೆ 200 ವಿದ್ಯಾರ್ಥಿಗಳು ಸೇರಿ 1219 ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿದ್ದಾರೆ. 15 ಸುಸ್ಥಿತಿಯಲ್ಲಿರುವ  ಕೊಠಡಿಗಳಿದ್ದು, ಮತ್ತೆ 4 ಕೊಠಡಿಗಳು ಪ್ರಗತಿ ಹಂತದಲ್ಲಿವೆ. ಅಲ್ಲದೆ, 10ಕಾಯಂ ಉಪನ್ಯಾಸಕರು, 20ಅತಿಥಿ ಉಪನ್ಯಾಸಕರು, ಹಾಗೂ 7 ಬೋಧಕೇತರ  ಸಿಬ್ಬಂದಿ ಇದ್ದಾರೆ. ಇದೀಗ, ಬಿ.ಎಸ್ಸಿ ಕೋರ್ಸ್ ಆರಂಭವಾಗಲಿದ್ದು, ಮತ್ತೊಷ್ಟು ಉಪನ್ಯಾಸಕ ಹುದ್ದೆಗಳು ಸೇರ್ಪಡೆಯಾಗಲಿವೆ . ಹೀಗಾಗಿ, ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತೊಷ್ಟು ವಿಸ್ತಾರಗೊಳ್ಳಲಿದೆ.
ಶಾಸಕರ ಒತ್ತಡ :
ಕೂಡ್ಲಿಗಿಯಲ್ಲಿರುವ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ ಕೋರ್ಸ್ ಆರಂಭವಾಗಲು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರ ಶೈಕ್ಷಣಿಕ ಕಾಳಜಿಗೆ ಸಾಕ್ಷಿಯಾಗಿದೆ. ತಂದೆ
ಎನ್ ಟಿ ಬೊಮ್ಮಣ್ಣ ಈ ಕಾಲೇಜಿನ ಉದ್ಘಾಟನೆ ನೆರವೇರಿಸಿದರೆ ಅವರ ಮಗನಾದ ಹಾಲಿ ಶಾಸಕ ಡಾ ಶ್ರೀನಿವಾಸ
 ಶಾಸಕರಾಗಿ ಆಯ್ಕೆಯಾದ ನಂತರ ತಂದೆ ಹಾಕಿದ ಶೈಕ್ಷಣಿಕ ಮರಕ್ಕೆ ಮೊದಲ ಆದ್ಯತೆಯಾಗಿ ಬಿ.ಎಸ್ಸಿ ಕೋರ್ಸ್ ಆರಂಭಕ್ಕೆ ನೀರೇರಿದು ಕಾಲೇಜು ಶಿಕ್ಷಣ ಇಲಾಖೆಗೆ ಹೆಚ್ಚಿನ ಒತ್ತಡ ಹಾಕಿ ಕೋರ್ಸ್ ತರುವಲ್ಲಿ ಯಶಸ್ವಿಯಾಗಿದ್ದಾರೆ . ಅಲ್ಲದೆ, ಈ ಕಾಲೇಜಿನ ಪ್ರಾಚಾರ್ಯ ಕಲ್ಲಪ್ಪ ಸಹ ಅದೇ ಕಾಲೇಜಿನ ಹಳೇಯ ವಿದ್ಯಾರ್ಥಿಯಾಗಿದ್ದು ಕಾಲೇಜಿನ ತಳಬುಡ ಅರಿತು ಕಾಲೇಜಿಗೆ ಅವಶ್ಯಕವಾಗಿರುವ ಕೋರ್ಸ್ ಹಾಗೂ ಕಟ್ಟಡಗಳ, ಸಿಬ್ಬಂದಿ ಹಾಗೂ ಉಪನ್ಯಾಸಕರ ಕೊರತೆ ನೀಗಿಸುವ ಪ್ರಯತ್ನದಲ್ಲಿ ಶಾಸಕರ ಗಮನಕ್ಕೆ ತಂದು ನಂತರ ವಿಶ್ವವಿದ್ಯಾಲಯದಲ್ಲಿ ಶಾಸಕರ ಒತ್ತಡದಿಂದ ಬಿ ಎಸ್ಸಿ ಕೋರ್ಸ್ ತರುವಲ್ಲಿ   ಸಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ.

ಕೂಡ್ಲಿಗಿ ಎಸ್‌ಎವಿಟಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹೊಸದಾಗಿ ಬಿ.ಎಸ್ಸಿ ಕೋರ್ಸ್ ಮತ್ತು ಪತ್ರಿಕೋದ್ಯಮ, ಐಚ್ಛಿಕ ಇಂಗ್ಲಿಷ್ ವಿಷಯ ಆರಂಭಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಅನುಮೋದನೆ ನೀಡಿದ್ದಾರೆ. ಈ ಕುರಿತು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿ ನಂತರ ಅದರ ಅನುಮೋದನೆ ಪತ್ರ ಸಹ ಕಾಲೇಜಿಗೆ ಬಂದಿರುವುದು  ಹರ್ಷ ತಂದಿದೆ.
– ಎನ್.ಕಲ್ಲಪ್ಪ, ಪ್ರಾಚಾರ್ಯ, ಎಸ್‌ಎವಿಟಿ ಸರಕಾರಿ ಪ್ರಥಮದರ್ಜೆ ಕಾಲೇಜು, ಕೂಡ್ಲಿಗಿ

ಅತ್ಯಂತ ಹಿಂದುಳಿದ ಕೂಡ್ಲಿಗಿ ತಾಲೂಕಿನಲ್ಲಿ ಬಡವರ ಮಕ್ಕಳ ಉನ್ನತ ಶಿಕ್ಷಣಕ್ಕೆ ನಮ್ಮ ತಂದೆ ಶಾಸಕರಾಗಿದ್ದಾಗ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾರಂಭಿಸಿದ್ದರು. ನಾನು ಶಾಸಕನಾದ ನಂತರ ಆ ಕಾಲೇಜಿನಲ್ಲಿ ಬಿ.ಎಸ್ಸಿ ಕೋರ್ಸ್ ಇಲ್ಲ ಎಂಬುದು ಅರಿತು ಬಡ ಮಕ್ಕಳ ಪಾಲಿಗೆ ಗಗನಕುಸುಮವಾಗಿರುವ ಬಿ ಎಸ್ಸಿ ಕೋರ್ಸ್ ತರುವ  ಮೊದಲ ಆದ್ಯತೆಯಾಗಿ ಒತ್ತಡ ಹಾಕಿದ್ದೆ. ಇದಕ್ಕೆ ಸ್ಪಂದಿಸಿದ ಕಾಲೇಜು ಶಿಕ್ಷಣ ಇಲಾಖೆ  ಸೋಮವಾರ ಅನುಮೋದನೆ ನೀಡಿರುವುದು ಸಂತಸ ತಂದಿದೆ. ಕ್ಷೇತ್ರದ ಹಾಗೂ ಇತರೆ ಭಾಗದ ಬಿ ಎಸ್ಸಿ ಹಾಗೂ ಪತ್ರಿಕೋದ್ಯಮ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು ತಕ್ಷಣದಿಂದ ಪ್ರವೇಶಾತಿ ಪಡೆದು ಪದವಿ ಪಡೆದುಕೊಂಡು ಉನ್ನತ ವ್ಯಾಸಂಗ ಪಡೆದುಕೊಳ್ಳುವಂತೆ ತಿಳಿಸುತ್ತಾರೆ.
– ಡಾ.ಎನ್.ಟಿ.ಶ್ರೀನಿವಾಸ್, ಶಾಸಕರು, ಕೂಡ್ಲಿಗಿ.