ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 28 :- ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕೆಲವೊಂದು ತಪ್ಪು ನಿರ್ಧಾರಗಳೂ ಕಾರಣವಿದ್ದು, ಈ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಧೃತಿಗೆಡದೇ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಾಮೂಹಿಕ ನಾಯಕತ್ವದಲ್ಲಿ ಸಾಗೋಣ ಎಂದು ಬಿಜೆಪಿ ಬಳ್ಳಾರಿ ವಿಭಾಗದ ಸಹ ಪ್ರಭಾರಿ ಚಂದ್ರಶೇಖರ ಪಿ ಹಲಗೇರಿ ತಿಳಿಸಿದರು.
ಅವರು ಪಟ್ಟಣದ ವಾಲ್ಮೀಕ ಸಮುದಾಯ ಭವನದಲ್ಲಿ ನಡೆದ ಸೋಲಿನ ಪರಾಮರ್ಶೆ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಮುಂಬರುವ 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಸಂಘಟನೆಗೆ ಒತ್ತು ನೀಡಬೇಕು ಎಂದರು.
ಪಕ್ಷದ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದುರ್ಗ ಸೂರ್ಯಪಾಪಣ್ಣ ಮಾತನಾಡಿ, ಕಾಂಗ್ರೆಸ್‌ನವರು ಮಾಡಿದ 40 ಪರ್ಸೆಂಟ್ ಕಮಿಷನ್ ಆರೋಪ ಸುಳ್ಳು ಎಂದು ಸಾಬೀತುಪಡಿಸಲು ವಿಫಲತೆ, ಎಸ್‌ಸಿ, ಎಸ್ಟಿ, ಒಬಿಸಿಗೆ ಮೀಸಲು ಹೆಚ್ಚಳ ಮಾಡಿದ್ದರ ಕುರಿತು ಅವರ ಮನವೊಲಿಸುವ ಕೆಲಸ ಆಗಲಿಲ್ಲ. ಆದರೂ, ಕ್ಷೇತ್ರದಲ್ಲಿ ಬಿಜೆಪಿಯ ಎಲ್ಲಾ ಮತಗಳು ನಮ್ಮ ಪಕ್ಷದ ಅಭ್ಯರ್ಥಿಗೆ ಸಿಕ್ಕಿವೆ. ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಲೋಕೇಶ್ ವಿ.ನಾಯಕ, ಮಂಡಲ ಅಧ್ಯಕ್ಷ ಕೆ.ಚನ್ನಪ್ಪ, ಎಸ್ಸಿ ಮೋರ್ಚಾ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ದುರುಗೇಶ್, ಮುಖಂಡ ಗುಳಿಗಿ ವೀರೇಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕೋಶಾಧ್ಯಕ್ಷ ಬಂಗಾರು ಹನುಮಂತು, ಮುಖಂಡರಾದ ಮೊರಬ ಶಿವಣ್ಣ, ಎಂ.ಬಿ.ಅಯ್ಯನಹಳ್ಳಿ ನಾಗಭೂಷಣ, ಬಣವಿಕಲ್ಲು ಕಾಮಶೆಟ್ಟಿ ನಾಗರಾಜ, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷೆ ದೀನಾ ಮಂಜುನಾಥ, ಕೆ.ಎನ್.ಭೀಮಣ್ಣ, ಕೆಇಬಿ ಬಸವರಾಜ, ರಜನಿಕಾಂತ್, ಶರಣನಗೌಡ, ಪಪಂ ಸದಸ್ಯ ಪಿ.ಚಂದ್ರು, ಪಿ.ಮಂಜುನಾಥ ನಾಯಕ, ಎಲ್.ಪವಿತ್ರಾ, ಸಕಲಾಪುರ ಗೊಲ್ಲರಹಟ್ಟಿ ಸಣ್ಣಬಾಲಪ್ಪ, ಉಜ್ಜಿನಿ ಲೋಕಪ್ಪ, ಪ್ರಾಣೇಶ್‌ಸ್ವಾಮಿ, ಗುರಿಕಾರ ರಾಘವೇಂದ್ರ ಇತರರಿದ್ದರು.
ಸೋಲಿಗೆ ಯಾರನ್ನೂ ಹೊಣೆ ಮಾಡಲ್ಲ
ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ನನ್ನ ಸೋಲಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಲ್ಲ. ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಪರಾಭವಗೊಂಡ ಅಭ್ಯರ್ಥಿ ಲೋಕೇಶ್ ವಿ.ನಾಯಕ ಅವರು ಆತ್ಮಾವಲೋಕನ ಸಭೆಯಲ್ಲಿ ತಿಳಿಸಿದರು. ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಎಲ್ಲರ ಜತೆ ನಾನೂ ಸೇರುವ ಮೂಲಕ ಶ್ರಮಿಸುತ್ತೇನೆ ಎಂದರು. ಪಕ್ಷದ ವಿಜಯನಗರ ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ದುರುಗೇಶ್ ಮಾತನಾಡಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸೋಲಿನಿಂದ ನೈತಿಕ ಹೊಣೆ ಹೊತ್ತು ಮಂಡಲ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರೆ, ಬಿಜೆಪಿ ಮುಖಂಡ ಗುರಿಕಾರ ರಾಘವೇಂದ್ರ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರಿಗಾದರೂ ಸ್ಥಳೀಯರಿಗೆ ಟಿಕೆಟ್ ನೀಡಿದರೆ ಮಾತ್ರ ಪಕ್ಷದ ವರ್ಚಸ್ಸು ಉಳಿಯಲಿದೆ ಎಂದು ಅಭಿಪ್ರಾಯ ತಿಳಿಸಿದರು.