ಕೂಡ್ಲಿಗಿಯಲ್ಲಿ ನೈಟ್ ಕರ್ಫ್ಯೂ ಗೆ ಜನ “ಸ್ಪಂದನೆ”

ಕೂಡ್ಲಿಗಿ.ಏ.22 :- ಇಡೀ ರಾಜ್ಯವನ್ನೇ ತಲ್ಲಣಗೊಳಿಸುತ್ತಿರುವ ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಆದೇಶದಂತೆ ಕಳೆದ ರಾತ್ರಿ 9ಗಂಟೆಯಿಂದ ಬೆಳಿಗ್ಗೆ 6ಗಂಟೆವರೆಗೆ ಕರ್ಫ್ಯೂ ಜಾರಿ ಮಾಡಿದ್ದು ಇದರ ಬಗ್ಗೆ ಕಳೆದ ರಾತ್ರಿ 7-30 ಗಂಟೆಯಿಂದ ಅಂಗಡಿ ಮಗ್ಗಟ್ಟು ಹೋಟೆಲ್ ಮಾಲೀಕರಿಗೆ ಕರ್ಫ್ಯೂ ಬಗ್ಗೆ ತಿಳಿಹೇಳಿದ್ದನ್ನು ಜನರು ಸ್ಪಂದಿಸಿ ಸರಿಯಾಗಿ 9ಗಂಟೆಗೆ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿಕೊಂಡು ಸರ್ಕಾರಿ ಆದೇಶ ಪಾಲನೆ ಮಾಡಿದ್ದಾರೆ.
ಕಳೆದ ರಾತ್ರಿಯಿಂದಲೇ ಜನತೆ ಕರ್ಫ್ಯೂ ನಿಯಮ ಪಾಲಿಸುತ್ತಿದ್ದು ರಾತ್ರಿ ಜನರಿಲ್ಲದೆ ಪಟ್ಟಣದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು ಕೊರೋನಾ ವಾರಿಯರ್ಸ್ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರ ಆರೋಗ್ಯ ಕಾಪಾಡುವಲ್ಲಿ ಸರ್ಕಾರದ ಆದೇಶದಂತೆ ರಾತ್ರಿ ಪೂರಾ ತಮ್ಮ ಕರ್ತವ್ಯದಲ್ಲಿ ತೊಡಗಿದ್ದರು. ಕೋವಿಡ್ ನಿಯಂತ್ರಣಕ್ಕೆ ತಾಲೂಕು ದಂಡಾಧಿಕಾರಿ ಸೇರಿದಂತೆ ಪೊಲೀಸ್ ಇಲಾಖೆಯ ಡಿವೈ ಎಸ್ ಪಿ, ಸಿಪಿಐ, ಪಿಎಸ್ಐ ಹಾಗೂ ಎಎಸ್ ಐ ಮತ್ತು ಸಿಬ್ಬಂದಿ ರಸ್ತೆಗಿಳಿದು ಮಾಸ್ಕ್ ನ ಮಹತ್ವದ ಬಗ್ಗೆ ತಿಳಿಹೇಳಿ ಮಾಸ್ಕ್ ಹಾಕದವರಿಗೆ ನೂರು ರೂ ದಂಡ ವಿಧಿಸುವ ಕಾರ್ಯದಲ್ಲಿ ತೊಡಗಿ ಕೋವಿಡ್ ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಹೇಳಬಹುದಾಗಿದೆ.
ನೈಟ್ ಕರ್ಫ್ಯೂ ಊಟಕ್ಕಾಗಿ ಹೋಟೆಲ್ ಅಲೆದಾಡಿದ ವೈದ್ಯ :- ಕಳೆದ ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶಿಸಿದ್ದು ಇದರಂತೆ ಕೂಡ್ಲಿಗಿ ಪಟ್ಟಣದ ಹೋಟೆಲ್ ಗಳು ಬಂದ್ ಮಾಡಿಕೊಂಡಿದ್ದು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ತಮ್ಮ ಕರ್ತವ್ಯ ಮುಗಿಸಿಕೊಂಡು ಊಟಕ್ಕೆ ಪಟ್ಟಣದಲ್ಲಿ ಒಂದು ತಾಸು ಸುತ್ತುವರೆದರು ಊಟ ಸಿಗದೆ ಪರದಾಡಿದ ಪ್ರಸಂಗ ಕಂಡು ಬಂದಿದ್ದು ಕೊರೋನಾ ವಾರಿಯರ್ಸ್ ಗಳಿಗೆ ಕರ್ಫ್ಯೂ ನಿಂದ ತೊಂದರೆಯಾಗದಂತೆ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಮತ್ತು ಪೊಲೀಸರಿಗೆ ಠಾಣಾ ವ್ಯಾಪ್ತಿಯಲ್ಲಿ ಊಟದ ವ್ಯವಸ್ಥೆ ಕಲ್ಪಿಸಿದರೆ ತಮ್ಮ ಕರ್ತವ್ಯ ಮಾಡಿಕೊಂಡು ಹೋಗುವಲ್ಲಿ ಸಹಕರಿಸಿದಂತಾಗುತ್ತದೆ ಸಂಬಂದಿಸಿದ ಇಲಾಖೆ ಈ ವ್ಯವಸ್ಥೆ ಕಲ್ಪಿಸಿದರೆ ಒಳಿತಾಗುತ್ತದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.