ಕೂಡ್ಲಿಗಿಯಲ್ಲಿ ಕೈ ನ ಡಾ ಶ್ರೀನಿವಾಸಗೆ  ಗೆಲುವು.     ಪಕ್ಷಾತೀತವಾಗಿ ಒಳಬೆಂಬಲ -ತಾಕತ್ತು ತೋರಿಸಿದ ಸ್ಥಳೀಯರು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.13 :-  ಕಳೆದ ಎರಡು ದಶಕಗಳಿಂದ ಸ್ಥಳೀಯರಾರು ಶಾಸಕರಾಗದೆ ಹೊರಗಿನಿಂದ ಬಂದವರೇ ಶಾಸಕರಾಗಿದ್ದರಿಂದ ಬೇಸತ್ತ ಕ್ಷೇತ್ರದ ಜನತೆಗೆ ಕಾಂಗ್ರೇಸ್ ಪಕ್ಷ  ಈ ಬಾರಿ ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ಅವರ ಪುತ್ರ ಡಾ ಶ್ರೀನಿವಾಸಗೆ ನೀಡಿದ್ದರಿಂದ ಉಳಿದ ಪಕ್ಷದ ಅಭ್ಯರ್ಥಿಗಳು ಹೊರಗಿನವರು ಸ್ಪರ್ಧೆ ಮಾಡಿದ್ದರಿಂದ ಅದೃಷ್ಟವೆಂಬಂತೆ ಡಾ ಶ್ರೀನಿವಾಸ ಅವರಿಗೆ ಸ್ಥಳೀಯರು ಪಕ್ಷಾತೀತವಾಗಿ ಒಳಗೊಳಗೇ  ಬೆಂಬಲಿಸಿ ಡಾಕ್ಟರ್  ಗೆಲುವಿಗೆ ಮುಂದಾಗುವ ಮೂಲಕ  ಸ್ಥಳೀಯರ  ತಾಕತ್ತು ಏನೆಂದು ತೋರಿಸಿದ್ದಾರೆ.
ಸ್ಥಳೀಯರಾದ ಎನ್ ಎಂ ನಬೀ ನಂತರ ಕೂಡ್ಲಿಗಿ ಕ್ಷೇತ್ರದಿಂದ ಹೊರಗಿನವರಾದ ಸಿರಾಜ್ ಶೇಕ್, ಅನಿಲ್ ಲಾಡ್, ಬಿ ನಾಗೇಂದ್ರ ಹಾಗೂ ಎನ್ ವೈ ಗೋಪಾಲಕೃಷ್ಣ ಇವರುಗಳು ಸತತ 25ವರ್ಷದಿಂದ ಕೂಡ್ಲಿಗಿ ಕ್ಷೇತ್ರದಿಂದ ಗೆದ್ದು ಕ್ಷೇತ್ರ ಬಿಟ್ಟು ಹೋಗಿದ್ದರಿಂದ ಬೇಸತ್ತ ಸ್ಥಳೀಯರು ಈ ಬಾರಿ ಕೂಡ್ಲಿಗಿ ಕ್ಷೇತ್ರಕ್ಕೆ ಸ್ಥಳೀಯರು ಸ್ಪರ್ಧೆ ಮಾಡಬೇಕು ಅವರನ್ನೇ ಗೆಲ್ಲಿಸಿಕೊಳ್ಳಬೇಕು ಎನ್ನುವ ನಿರ್ಧಾರ ಮಾಡಿಕೊಂಡಿದ್ದು ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಳೀಯ ಡಾ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿತ್ತು ಆದರೆ  ಕಾಂಗ್ರೇಸ್ ವಂಚಿತ ಲೋಕೇಶ್ ನಾಯಕ ಗೆ ಬಿಜೆಪಿ ಟಿಕೇಟ್ ನೀಡಿದ್ದರಿಂದ ಬಿಜೆಪಿ ಟಿಕೆಟ್ ವಂಚಿತರಾದ ಸ್ಥಳೀಯರಾದ ಬಂಗಾರು ಹನುಮಂತು ಹಾಗೂ ಇತರರಿಗೆ ಬೇಸರ ತಂದಿದ್ದು ಸ್ಥಳೀಯರ ತಾಕತ್ತು ಏನೆಂದು ತೋರಿಸಬೇಕು ಎಂದು ಪಕ್ಷಾತೀತವಾಗಿ ಒಳಗೊಳಗೇ ಎಲ್ಲರೂ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಸಿರಾಜ್  ಶೇಕ್  ಬಳಿಕ 20ವರ್ಷ  ನಂತರ ಕೂಡ್ಲಿಗಿ ಕ್ಷೇತ್ರಕ್ಕೆ ಕಾಂಗ್ರೇಸ್  ಗೆಲುವು ಪಡೆದಿದ್ದು ಇತಿಹಾಸ ನಿರ್ಮಿಸಿದೆ.
ತಂದೆ ಆಸೆ ಈಡೇರಿಸಿದ ಮಗ :- ತಂದೆ ಎನ್ ಟಿ ಬೊಮ್ಮಣ್ಣ ಕೂಡ್ಲಿಗಿ ಕ್ಷೇತ್ರದಲ್ಲಿ 1984ಹಾಗೂ 1989ರಲ್ಲಿ ಎರಡು ಬಾರಿ ಶಾಸಕರಾದರು ನಂತರ ಕ್ಷೇತ್ರ ಪುನರ್ ವಿಂಗಡಣೆ ನಂತರವಾಗಿ ಎಸ್ಟಿ ಮೀಸಲು ಕ್ಷೇತ್ರವಾದಾಗ ಪಕ್ಷೇತರ, ಬಿಜೆಪಿ ಜೆಡಿಎಸ್ ನಿಂದ  ಸ್ಪರ್ಧೆ ಮಾಡಿದ್ದರೂ ಗೆಲುವು ಸಾಧಿಸಲಾಗಲಿಲ್ಲ ತಂದೆ ಎನ್ ಟಿ ಬೊಮ್ಮಣ್ಣ ನಿಧನ ನಂತರ ಗೆಲುವು ಪಡೆದು ತಂದೆ ಇತಿಹಾಸ ಸೃಷ್ಟಿಸುವ ಗುರಿ ಇಟ್ಟುಕೊಂಡು ಜೆಡಿಎಸ್ ತೊರೆದ ಮಗ ಡಾ ಶ್ರೀನಿವಾಸ ಕಾಂಗ್ರೆಸ್ ಸೇರಿಕೊಂಡು ಟಿಕೇಟ್ ಪಡೆದು ಸ್ಪರ್ಧೆ ಮಾಡಿ 40ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ ಡಾಕ್ಟರ್ ತಂದೆ ಆಸೆ ಈಡೇರಿಸಿ ಕಾಂಗ್ರೇಸ್ ಕೋಟೆಯನ್ನು ಕ್ಷೇತ್ರದಲ್ಲಿ ಮತ್ತೊಮ್ಮೆ ನಿರ್ಮಿಸಿದ್ದಾರೆ.
ಕೂಡ್ಲಿಗಿ ಕ್ಷೇತ್ರದಲ್ಲಿ ಸಂಭ್ರಮ : ಕಾಂಗ್ರೆಸ್ ನ ಗೆಲುವಿನ ಫಲಿತಾಂಶ ಹೊರಬೀಳುತ್ತಿದ್ದಂತೆ ಇತ್ತ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಗರು ಮುಖಂಡರು  ಕಾರ್ಯಕರ್ತರು  ಸಿಹಿ ಹಂಚುವ ಹಾಗೂ ಪಟಾಕಿ ಸಿಡಿಸುವ ಮೂಲಕ ಕ್ಷೇತ್ರದಲ್ಲಿ ಸಂಭ್ರಮಾಚರಣೆ ಮಾಡಿದರು.