ಕೂಡ್ಲಿಗಿಯಲ್ಲಿ ಕಾಣೆಯಾದ ಬಾಲಕ  ತಮಿಳುನಾಡಿನಲ್ಲಿ ಪತ್ತೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು.27 :- ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಜು. 21 ರಂದು ಕಾಣೆಯಾಗಿದ್ದ ಬಾಲಕನೋರ್ವ ಕೂಡ್ಲಿಗಿ ಪೊಲೀಸರಿಂದ ಇಂದು ನಸುಕಿನ ಜಾವ  ತಮಿಳುನಾಡಿನ ಕಾಟಪಾಡಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಮಾಡಲಾಗಿದ್ದು ಕಾಣೆಯಾದ ಬಾಲಕ ಸಿಗುವಲ್ಲಿ  ಪೊಲೀಸರ ಸತತ ಶ್ರಮದಿಂದ ಸುಖಾಂತ್ಯ ಕಂಡಿದೆ ಎಂದು ಹೇಳಬಹುದಾಗಿದೆ.
ಪಟ್ಟಣದ ಬಾಪೂಜಿನಗರದ  ರುದ್ರೇಶ (15) ಎಂಬಾತನು ಸಂಡೂರಿನ ಬಿಕೆಜಿ ಖಾಸಗಿ ಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅಲ್ಲಿ ನಡೆಸಿದ ಟೆಸ್ಟ್ ನಲ್ಲಿ ಫೇಲ್ ಅಂಕ ಬಂದಿದೆ ಎಂದು ಮನೆಯ ಪೋಷಕರನ್ನು ಶಾಲೆಗೆ ಕರೆಹಿಸಿ ಬೈಸುತ್ತಾರೆಂದು ಜುಲೈ 21 ರಂದು ಕೂಡ್ಲಿಗಿ ಬಸ್ ನಿಲ್ದಾಣದಿಂದ ಅಂದೇ ಕಾಣೆಯಾಗಿದ್ದಾನೆ.
ತನ್ನ ಜೇಬಿನಲ್ಲಿದ್ದ ಬರೀ ನೂರು ರೂಪಾಯಿಯಲ್ಲಿ ಬಸ್ ಏರಿದ್ದ ಆದರೆ ಯಾವ ಬಸ್ ಎಂಬುದು ಸಿಸಿ ಕ್ಯಾಮರಾ ಚೆಕ್ ಮಾಡಿದರು  ತಿಳಿಯದಾದಾಗ ಸಂಬಂಧಿಕರ ಊರುಗಳಾದ ಬಾಗಲಕೋಟ ಮತ್ತು ಕೊಟ್ಟೂರು ಭಾಗದಲ್ಲಿ ಹುಡುಕಾಡಿದರೂ ಸಿಗದೇ ಇದ್ದು ಕಾಣೆಯಾದ  ಎರಡು ದಿನದ ನಂತರ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಹುಡುಗ ಕಾಣೆಯಾದ ಪ್ರಕರಣ ದಾಖಲಾಗುತ್ತದೆ
ದಾಖಲಾದ ನಂತರ ಪ್ರಕರಣ ಬೆನ್ನತ್ತಿದ ಪೊಲೀಸರು ಕೂಡ್ಲಿಗಿ ಡಿವೈಎಸ್ ಪಿ ಹರೀಶ ಹಾಗೂ ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ಮಾರ್ಗದರ್ಶನದಲ್ಲಿ ಕೂಡ್ಲಿಗಿ ಪಿಎಸ್ಐ ಧನುಂಜಯ ನೇತೃತ್ವದ ಕ್ರೈಮ್ ಸಿಬ್ಬಂದಿಗಳಾದ ರಾಘವೇಂದ್ರ ಹಾಗೂ ಬಸವರಾಜ್ ತಂಡ  ಕಾಣೆಯಾದ ದಿನದಂದು ಆ ಸಮಯದಲ್ಲಿ ಎಲ್ಲಾ ಕಡೆ ಹೋದ ಆದರಲ್ಲಿ ಹೊಸಪೇಟೆ ಮತ್ತು ಬೆಂಗಳೂರು ಕಡೆ ಹೋಗುವ ಮಾರ್ಗದ ಬಸ್ಸುಗಳು  ಹಾಗೂ ಅದರ ಸಿಬ್ಬಂದಿ ಫೋನ್ ನಂಬರ್ ಕಲೆಹಾಕಿದ ಪೊಲೀಸರಿಗೆ ಕೂಡ್ಲಿಗಿ ಘಟಕದ ಬಸ್ಸಿನಲ್ಲಿ ಬಾಲಕ ಚಿತ್ರದುರ್ಗಕ್ಕೆ ಹೋದ ಮಾಹಿತಿ ಕಂಡಕ್ಟರ್ ನಿಂದ ತಿಳಿದಾಗ ಚಿತ್ರದುರ್ಗ ಪ್ರಯಾಣ ಬೆಳೆಸಿದ ತಂಡ ಅಲ್ಲಿ ಹೋಗಿ ವಿಚಾರಿಸಿ ಬಸ್ ನಿಲ್ದಾಣದ ಸಿ ಸಿ ಕ್ಯಾಮರಾ ವೀಕ್ಷಿಸಲಾಗಿ ಜುಲೈ 21 ರಂದು ರಾತ್ರಿ ಚಿತ್ರದುರ್ಗದ ನಿಲ್ದಾಣದಲ್ಲಿ ಮಲಗಿರುವ ಹಾಗೂ ಹೊಸದುರ್ಗದ ಮಹಿಳೆಯನ್ನು ಪರಿಚಯಿಸಿ ಕೆಲಸ ಕೇಳಿದ ಪ್ರಸಂಗ ತಿಳಿದಾಗ ನಂತರ ಹೊಸದುರ್ಗ ಪ್ರಯಾಣಬೆಳೆಸಿದ ಪೊಲೀಸರಿಗೆ ಬೆಂಗಳೂರಿಗೆ ಹೋಗಿರುವ ಮಾಹಿತಿ ತಿಳಿದು ಬೆಂಗಳೂರಿಗೆ ಹೋಗಿ ವಿಚಾರಿಸಲು ಮೆಜೆಸ್ಟಿಕ್ ನ ಹೋಟೆಲ್ ನಲ್ಲಿ ಒಂದು ದಿನ ಕೆಲಸಮಾಡಿ ತಮಿಳುನಾಡಿಗೆ ಹೋಗುವ ಯತ್ನ ಮಾಡಿ ಹೋಗಿರಬಹುದೆಂದು ಮಾಹಿತಿ ಕಲೆಹಾಕಿದ ಪೊಲೀಸರಿಗೆ ಮತ್ತೊಂದು ಸುಳಿವು ದೊರೆತಿದ್ದು ರೈಲಿನಲ್ಲಿ ತಮಿಳುನಾಡಿಗೆ ಹೋಗಿ ತಮಿಳುನಾಡಿನ ಭಾಷೆ ತಿಳಿಯದೆ ಬೆಂಗಳೂರು ಕಡೆ ವಾಪಸ್ಸಾಗುತ್ತಿದ್ದಾನೆ ಎಂಬುದಕ್ಕೆ ಬಾಲಕನು ತಮಿಳುನಾಡಿನ ಕಾಟಪಾಡಿಯಲ್ಲಿ ಲಾಲ್ ಬಾಗ್ ಎಕ್ಸ್ ಪ್ರೆಸ್ ರೈಲಿನಿಂದ ಇಳಿದು  ಬೇರೊಬ್ಬರ ಫೋನ್ ನಿಂದ ತಾಯಿಗೆ ಕರೆಮಾಡಿ ಮಗ ಕಾಣೆಯಾಗಿದ್ದರೂ ಹುಡುಕುವ ಪ್ರಯತ್ನ ಮಾಡಿಲ್ಲ ಅಂತ ಹೇಳಿದ ಅಷ್ಟರಲ್ಲಿ ಬಂದ ರೈಲು ಹೊರಟುಹೋಗಿದ್ದು ಬೆಂಗಳೂರು ಕಡೆ ಹೋಗಲು ಮತ್ತೊಂದು ಟ್ರೈನ್ ವಿಚಾರಿಸಲು ಕಾವೇರಿ ಎಕ್ಸ್ ಪ್ರೆಸ್ ಬರುತ್ತೆ ಅಂತ ರೈಲ್ವೆ ಸಿಬ್ಬಂದಿ ತಿಳಿಸಿದರು. ಅವನು ಮಾಡಿದ ಕರೆಯ  ಫೋನ್ ಲೊಕೇಶನ್ ಪೊಲೀಸರು ಪತ್ತೆ ಮಾಡಲಾಗಿ ತಮಿಳುನಾಡು ಕಾಟಪಾಡಿ ರೈಲ್ವೆ ನಿಲ್ದಾಣವೆಂದು ತಿಳಿಯಿತು ಅಲ್ಲಿನ ರೈಲ್ವೆ ಪೊಲೀಸ್ ರಿಗೆ ಮಾಹಿತಿ ನೀಡಿ ಅವನ ಭಾವಚಿತ್ರ ವಾಟ್ಸಾಪ್ ಗೆ ಹಾಕಲಾಗಿ ರೈಲ್ವೆ ಪೊಲೀಸರು ಬಾಲಕನನ್ನು ಕಳೆದ ರಾತ್ರಿ ಪತ್ತೆಹಚ್ಚಿ ತಮ್ಮ ಸುಪರ್ದಿಯಲ್ಲಿಟ್ಟುಕೊಂಡು ಇಂದು ನಸುಕಿನ ಜಾವ ಕೂಡ್ಲಿಗಿ ಪೊಲೀಸರಾದ ಪತ್ತೆಕಾರ್ಯದಲ್ಲಿ ತೊಡಗಿದ್ದ ರಾಘವೇಂದ್ರ ಹಾಗೂ ಬಸವರಾಜ ರವರಿಗೆ  ಬಾಲಕನನ್ನು ಒಪ್ಪಿಸಿದ್ದಾರೆಂದು ಕಾಣೆಯಾದ ಬಾಲಕನ ಮಾವ ವೆಂಕಟೇಶ ಹಾಗೂ ಅವರ ಸ್ನೇಹಿತರ ಬಳಗದ ಕೂಡ್ಲಿಗಿ ಪಟ್ಟಣ ಪಂಚಾಯತಿ ಸದಸ್ಯ ಸಚಿನ್ ಕುಮಾರ, ಮಾಳ್ಗಿ ಗುರುರಾಜ ಸೇರಿದಂತೆ ಇತರರು ಪತ್ತೆಕಾರ್ಯದಲ್ಲಿ ತೊಡಗಿದ್ದು  ಕೂಡ್ಲಿಗಿ ಪೊಲೀಸರ ಸತತ  ಪರಿಶ್ರಮದಿಂದ ಕಾಣೆಯಾದ ಬಾಲಕ ಪತ್ತೆಮಾಡಿಕೊಡುವ ಮೂಲಕ ಸುಖಾಂತ್ಯ ಕಂಡಿದೆ ಅಲ್ಲದೆ  ಇಂದು ರಾತ್ರಿ ಕೂಡ್ಲಿಗಿಗೆ ಬಾಲಕನನ್ನು ಕರೆತರುವ  ಬಗ್ಗೆ  ಮಾಹಿತಿ ತಿಳಿದಿದೆ.
 ಶ್ಲಾಘನೆ :
ಬಾಲಕನ ಪತ್ತೆಕಾರ್ಯದಲ್ಲಿ ತೊಡಗಿದ್ದ ಕೂಡ್ಲಿಗಿ ಪೊಲೀಸರ ಪರಿಶ್ರಮಕ್ಕೆ ವಿಜಯನಗರ ಎಸ್ಪಿ ಡಾ ಅರುಣ್ ಹಾಗೂ ಬಾಲಕನ ಪಾಲಕ ಪೋಷಕರು ಕೂಡ್ಲಿಗಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಗೆ ಶ್ಲಾಘಿಸಿದ್ದಾರೆ ಎಂದು ತಿಳಿದಿದೆ.