
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ.3 :- ಪಟ್ಟಣದ ಪ್ರವಾಸಿಮಂದಿರದ ಆಸುಪಾಸಿನಲ್ಲಿ ಕರಡಿಯೊಂದು ಶುಕ್ರವಾರ ಮಧ್ಯರಾತ್ರಿ ಪ್ರತ್ಯಕ್ಷವಾಗಿರುವ ವಿಡಿಯೋ ಶನಿವಾರ ಮಧ್ಯಾಹ್ನದಿಂದ ಫುಲ್ ವೈರಲ್ ಆಗಿದ್ದು ಜನರಲ್ಲಿ ಭಯದ ಆತಂಕ ಮೂಡಿಸಿದ್ದು ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ಜನರಿಗೆ ರಾತ್ರಿ ವೇಳೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ಸಂದೇಶ ನೀಡಿ ಧ್ವನಿವರ್ಧಕದಲ್ಲೂ ಪ್ರಚುರಪಡಿಸುತ್ತಿದ್ದಾರೆ.
ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳಿಗೆ ಆಹಾರವಿಲ್ಲದೆ ನಾಡಿನೊಳಗೆ ಪ್ರವೇಶಮಾಡುತ್ತಿದ್ದು ಶುಕ್ರವಾರ ಮಧ್ಯರಾತ್ರಿ ಸುಮಾರು 11-50 ಗಂಟೆ ಸುಮಾರಿಗೆ ಕರಡಿಯೊಂದು ಪ್ರವಾಸಿಮಂದಿರದ ಆಸುಪಾಸಿನಲ್ಲಿ ಪ್ರತ್ಯಕ್ಷವಾಗಿದ್ದನ್ನು ಡಾ ಶ್ರೀನಿವಾಸ ಅವರ ಸಂಬಂದಿಗಳು ಅವರ ಹೊಸಮನೆ ಕೆಲಸ ಮುಗಿಸಿಕೊಂಡು ಅಂಬೇಡ್ಕರ್ ಸರ್ಕಲ್ ಕಡೆ ಕಾರಿನಲ್ಲಿ ಹೋಗುವಾಗ ತೆರಳುಬಾಳು ಶಾಲೆಯ ಕಂಪೌಂಡ್ ಹತ್ತಿರ ಕರಡಿಯನ್ನು ಕಂಡು ಕಾರಿನ ಬೆಳಕಿಗೆ ಕರಡಿ ಮೇಧರ ನಾಗರಾಜ ಕಡಪ ಅಂಗಡಿ ಮುಂದೆ ಕೂಡ್ಲಿಗಿ ನ್ಯಾಯಾಲಯದ ನ್ಯಾಯಧೀಶರ ವಸತಿ ಗೃಹದ ಮುಂದಿನ ರಸ್ತೆ ವಿಭಜಕವನ್ನು ದಾಟಿ ಪಟ್ಟಣ ಶೆಟ್ರು ಪಂಪಣ್ಣ ಅವರ ಅಂಗಡಿ ಪಕ್ಕದ ಲೋಕೋಪಯೋಗಿ ಇಲಾಖೆಯ ಕಂಪೌಂಡ್ ಮುಂದೆ ಹೂವಿನಸಸಿಗಳ ಮಾರಾಟ ಮಾಡುವ ಜಾಗದಕಡೆ ಓಡಿ ಹೋಗಿ ಕಣ್ಮರೆಯಾಗುವ
ಹೋಗುವ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ ಇದು ಶನಿವಾರ ಮಧ್ಯಾಹ್ನದಿಂದ ಪಟ್ಟಣದ ಜಾಲತಾಣದಲ್ಲಿ ಸಂಪೂರ್ಣ ವೈರಲ್ ಆಗಿದೆ. ಅದಕ್ಕೂ ಮೊದಲು ಕೂಡ್ಲಿಗಿ ಪೊಲೀಸರು ರಾತ್ರಿ ಗಸ್ತು ತಿರುಗುವಾಗ ಕರಡಿಯನ್ನು ಕಂಡು ತಕ್ಷಣ ಕೂಡ್ಲಿಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಕೂಡ್ಲಿಗಿ ನೂತನ ಅರಣ್ಯಾಧಿಕಾರಿ ಸಂದೀಪನಾಯಕ ಮಾರ್ಗದರ್ಶನದಂತೆ ಡಿಆರ್ ಎಫ್ ಓ ಗಳಾದ ಕುಬೇರ ಹಾಗೂ ಗೋವಿಂದಪ್ಪ ಹಾಗೂ ಚಾಲಕ ಗಣೇಶ ತಕ್ಷಣ ಧಾವಿಸಿ ವೀಕ್ಷಣೆ ಮಾಡಲಾಗಿ ಸಿಗದೇ ಇದ್ದು ರಾತ್ರಿ ಗಸ್ತು ಸಹ ನಡೆಸಿದ್ದಾರೆ.
ಜನರಿಗೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ಸಂದೇಶ : ಕರಡಿ ಪ್ರತ್ಯಕ್ಷವಾಗಿರುವ ಸುತ್ತಮುತ್ತಲಿನ ಸ್ಥಳದಲ್ಲಿರುವ ಮನೆಗಳ ಹತ್ತಿರ ಹೋಗಿ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳು ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರದಂತೆ ಹಾಗೂ ಕರಡಿಯ ಸುಳಿವು ಕಂಡಲ್ಲಿ ತಿಳಿಸುವಂತೆ ಪಂಪಣ್ಣ ಕಂಪೌಂಡ್ ನಲ್ಲಿ ವಾಸಿಸುವ ಜನತೆಗೆ ಎಚ್ಚರಿಕೆ ಸಂದೇಶ ತಿಳಿಸಿದ್ದಾರೆ ಮತ್ತು ಕೂಡ್ಲಿಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಧ್ವನಿವರ್ಧಕದಲ್ಲಿ ಪ್ರಚುರ ಪಡಿಸಿ ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರದಂತೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಕೃತಕ ಮದ್ದು ಸಿಡಿಸಿದ ಅರಣ್ಯ ಸಿಬ್ಬಂದಿ : ಕಳೆದ ರಾತ್ರಿ ಸಹ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಕುಬೇರ ಹಾಗೂ ಗೋವಿಂದಪ್ಪ ಪಂಪಣ್ಣ ಕಂಪೌಂಡ್ ನ ಕೊನೆಭಾಗದಲ್ಲಿರುವ ತೋಟದ ಸಮೀಪದಲ್ಲಿ ಆನೆ ಪಟಾಕಿ ಹಾಗೂ ಕೃತಕವಾಗಿ ತಯಾರಿಸಿದ ಮದ್ದುವನ್ನು ಕರಡಿ ಸುತ್ತಮುತ್ತ ಎಲ್ಲಿಯಾದರೂ ಇದ್ದಲ್ಲಿ ಓಡಿ ಹೋಗುತ್ತದೆ ಎನ್ನುವ ನಿಟ್ಟಿನಲ್ಲಿ ಸಿಡಿಸಿ ನಂತರ ಅಕ್ಕಪಕ್ಕದ ಮನೆಯಲ್ಲಿದ್ದ ಪಿ ಪಂಪಾಪತಿ ಹಾಗೂ ಗಡ್ಡಿ ವಿಜಯಕುಮಾರ ಅವರಿಗೆ ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರದಂತೆ ತಿಳಿಸಿದ್ದಾರೆ ಹಾಗೂ ಪಟ್ಟಣದಲ್ಲಿ ಕರಡಿ ಪ್ರತ್ಯಕ್ಷದಿಂದ ಪೊಲೀಸ್ ಇಲಾಖೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೈ ಅಲಾರ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.