ಕೂಡ್ಲಿಗಿಯಲ್ಲಿ ಎರಡು ಮನೆಗಳ್ಳತನ.5.78ಲಕ್ಷ ರೂ ಮೌಲ್ಯದ ಆಭರಣ ಹಾಗೂ 1.50ಲಕ್ಷ ರೂ ನಗದು ಹಣ  ಕಳುವು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ.16 :-   ಪಟ್ಟಣದ ಬಾಪೂಜಿ ನಗರದ ಎರಡು ಮನೆಗಳಲ್ಲಿ ಯಾರೋ ಕಳ್ಳರು ಮನೆ ಬೀಗ ಮುರಿದು ಒಟ್ಟು  5.78ಲಕ್ಷ ರೂ ಮೌಲ್ಯದ ಆಭರಣಗಳು ಹಾಗೂ 1.50ಲಕ್ಷರೂ ನಗದು ಹಣ ಕಳುವು ಮಾಡಿಕೊಂಡು ಹೋಗಿರುವ ಘಟನೆ ಜನವರಿ 14ರಿಂದ 15ರ ಸಂಜೆಯ ಮದ್ಯಾವಧಿಯಲ್ಲಿ ಜರುಗಿದ್ದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಎರಡು  ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಪಟ್ಟಣದ ಬಾಪೂಜಿ ನಗರದ ಹಿರೇಮಠ ಕಾಲೇಜಿನ ಹಿಂಭಾಗದಲ್ಲಿರುವ ಮನೆಗಳಲ್ಲಿ ಹನಸಿ ಜೆಸ್ಕಾಂನಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಕೆ ತಿಪ್ಪೆರುದ್ರಪ್ಪ ಅವರ ಮನೆಯಲ್ಲಿ ಯಾರು ಇಲ್ಲದ್ದನ್ನು ಕಂಡು ಯಾರೋ ಕಳ್ಳರು ಮನೆಬಾಗಿಲು ಮುರಿದು ಗಾಡ್ರೆಜ್ ಹಾಗೂ ಗೋಡೆಗೆ ಹೊಂದಿಕೊಂಡಿರುವ ಅಲ್ಮರಾ ಬಾಗಿಲು ಮುರಿದು ಅದರೊಳಗಿನ ಬಂಗಾರದ ಚೈನ್ ಉಂಗುರ ಸೇರಿದಂತೆ 2.34 ಲಕ್ಷ ರೂ ಮೌಲ್ಯದ ಬಂಗಾರದ ಆಭರಣ ಸೇರಿದಂತೆ  1ಲಕ್ಷರೂ ನಗದು ಹಣ ಕಳುವು ಮಾಡಿಕೊಂಡು ಹೋಗಿದ್ದಾರೆಂದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಸೋಮವಾರ  ಸಂಜೆ ಪ್ರಕರಣ ದಾಖಲಾಗಿದೆ.
ಅದರಂತೆ ಜನವರಿ 14 ರ ಬೆಳಿಗ್ಗೆಯಿಂದ 15ರ ಸಂಜೆಯ ಮಧ್ಯಾವಧಿಯಲ್ಲಿ ಪಟ್ಟಣದ ಬಾಪೂಜಿ ನಗರದ ಹಿರೇಮಠ ಕಾಲೇಜಿನ ಹಿಂಭಾಗದ ಮನೆಗಳಲ್ಲಿನ ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿಗಳ ಕಛೇರಿಯಲ್ಲಿ ಫಾರ್ಮಸಿ ಆಫೀಸರ್ ಆಗಿರುವ ಹನುಮಂತಪ್ಪ ಅವರ ಮನೆಯಲ್ಲಿ ಯಾರೋ ಕಳ್ಳರು ಮನೆ ಬಾಗಿಲು ಮುರಿದು ಗಾಡ್ರೆಜ್ ನಲ್ಲಿದ್ದ
3.44ಲಕ್ಷ ರೂ ಮೌಲ್ಯದ ಬಂಗಾರದ ಆಭರಣ, 50ಸಾವಿರ ನಗದು ಹಣ ಸೇರಿ ಒಟ್ಟು 3.94ಲಕ್ಷ ರೂ ನಷ್ಟು ನಗದು ಹಣ ಆಭರಣ ಕಳುವು ಮಾಡಿಕೊಂಡು ಪರಾರಿಯಾಗಿದ್ದಾರೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಕಳೆದ ರಾತ್ರಿ ಪ್ರಕರಣ ದಾಖಲಾಗಿದೆ.
ಈ ಎರಡು ಪ್ರತ್ಯೇಕ ಘಟನೆಯ ಕಳುವು ಪ್ರಕರಣದ ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರೆ, ಕೂಡ್ಲಿಗಿ ಸಿಪಿಐ ಸುರೇಶ ತಳವಾರ ಹಾಗೂ ಪಿಎಸ್ಐ ಸೇರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಕೂಡ್ಲಿಗಿ ಸಿಪಿಐ ತನಿಖೆ ಕೈಗೊಂಡಿದ್ದಾರೆಂದು ತಿಳಿದಿದೆ.
ಸಾರ್ವಜನಿಕರ ಗಮನಕ್ಕೆ : ಮನೆಯಿಂದ ಬೇರೆ ಊರುಗಳಿಗೆ ಹೋಗುವವರು ಪಕ್ಕದ ಮನೆಯವರಿಗೆ ಮತ್ತು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಬೇಕು ಅಲ್ಲದೆ ಬಂಗಾರದ ಆಭರಣ, ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳ ಮೇಲೆ ನಿಗಾ ಇಟ್ಟುಕೊಂಡು ಜೊತೆಯಲ್ಲಿ ತೆಗೆದುಕೊಂಡು ಹೋಗುವುದಾಗಲಿ ಬ್ಯಾಂಕ್ ಲಾಕಾರ್ ನಲ್ಲಿ ಇಡುವುದಾಗಲಿ ಇಲ್ಲವಾದಲ್ಲಿ ಪಕ್ಕದ ಮನೆಯ ನಂಬಿಕಸ್ತರ ಕೈಯಲ್ಲಿ ಕೊಟ್ಟು ಹೋಗುವಂತೆ  ಹಾಗೂ ಏರಿಯಾಗಳಲ್ಲಿ ಯಾರಾದರೂ ಅಪರಿಚಿತರು ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ಪೊಲೀಸರಿಗೆ ಮಾಹಿತಿ ನೀಡಿ ಅಪರಾಧ ಪ್ರಕರಣ ಜರುಗದಂತೆ ಮುಂಜಾಗ್ರತೆ ವಹಿಸಿ ಎಂದು ಕೂಡ್ಲಿಗಿ ಪಟ್ಟಣದಲ್ಲಿ  ಪೊಲೀಸರು ಧ್ವನಿವರ್ಧಕದ ಮೂಲಕ  ಮುನ್ನೆಚ್ಚರಿಕೆಯ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ  ತಿಳಿಸುತ್ತಿದ್ದಾರೆ.
ಏಳು ಕಳ್ಳತನ ಪ್ರಕರಣದಲ್ಲಿ ನಾಲ್ಕು ಇತ್ಯರ್ಥ : ಈ ಎರಡು ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು ಏಳು ಕಳ್ಳತನ ಪ್ರಕರಣಗಳಾಗಿದ್ದು ನಾನು ಬಂದ ನಂತರ ಕೆಲವೇ ತಿಂಗಳಲ್ಲಿ  ಈಗಾಗಲೇ ನಾಲ್ಕು ಪ್ರಕರಣ ಬೆನ್ನತ್ತಿ ಆರೋಪಿಗಳನ್ನ ಬಂಧಿಸಿ ಕಳ್ಳತನವಾದ ಆಭರಣ ಹಾಗೂ ನಗದು ಹಣವನ್ನು ಕಳಕೊಂಡವರಿಗೆ ಕಾನೂನು ರೀತ್ಯವಾಗಿ ಒಪ್ಪಿಸಲಾಗಿದೆ. ಅದರಂತೆ ಉಳಿದ ಮೂರು ಪ್ರಕರಣವನ್ನು ತಂಡ ರಚಿಸಿ ಪತ್ತೇಕಾರ್ಯ ಕ್ಕೆ ಮುಂದಾಗುವುದಾಗಿ ಕೂಡ್ಲಿಗಿ ಸಿಪಿಐ ಸುರೇಶ ತಳವಾರ ಭರವಸೆ ನೀಡಿದ್ದಾರೆ.