ಕೂಡಿ ಬಾಳಿದರೆ ಧರ್ಮ ಸಂಸ್ಕøತಿ ಉಳಿಯಲು ಸಾಧ್ಯ : ಶ್ರೀ ರಂಭಾಪುರಿ ಜಗದ್ಗುರುಗಳು

ಲೋಹಾರ : ಡಿ. 23:ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ಧರ್ಮದ ಧ್ಯೇಯ. ಗುರು ಮತ್ತು ಶಿಷ್ಯರು ಪರಸ್ಪರ ಅರಿತು ಬೆರೆತು ಬಾಳಿದರೆ ಧರ್ಮಶಕ್ತಿ ಸಂವರ್ಧನೆಗೊಳ್ಳಲು ಸಾಧ್ಯ. ಧರ್ಮ ಸಂಸ್ಕøತಿ ಉಳಿವು ಬೆಳವಣಿಗೆಗಾಗಿ ಕೂಡಿಕೊಂಡು ಬಾಳುವುದು ಶ್ರೇಯಸ್ಕರವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ಉಸ್ಮನಾಬಾದ ಜಿಲ್ಲೆ ಲೋಹಾರ ತಾಲೂಕಿನ ಅಚಲೇರಿ ಶ್ರೀ ಶಿವಬಸವ ಸಂಸ್ಥಾನ ಹಿರೇಮಠದ ಶ್ರೀ ಗುರು ಪಟ್ಟಾಭಿಷೇಕ ಮಹೋತ್ಸವದ ಧರ್ಮ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಉದಾತ್ತ ಮೌಲ್ಯ ಹೊಂದಿದ ವೀರಶೈವ ಧರ್ಮದ ಇತಿಹಾಸ ಮತ್ತು ಬೆಳೆದುಕೊಂಡು ಬಂದ ಪರಂಪರೆ ಬಹಳ ಜನರಿಗೆ ಗೊತ್ತಿಲ್ಲ. ಧರ್ಮದಲ್ಲಿ ಏನೆಲ್ಲ ಮೌಲ್ಯಗಳಿದ್ದರೂ ಅವುಗಳ ಬಗ್ಗೆ ಅರಿವು ಆಚರಣೆಯಿಲ್ಲದೇ ಮಾನವನ ಬದುಕು ದುರ್ಬಲಗೊಳ್ಳುತ್ತಿದೆ. ಗುರು ಶಿಷ್ಯರ ಬಾಂಧವ್ಯ ಮೊದಲಿಗಿಂತ ಇಂದು ಸಡಿಲಗೊಳ್ಳುತ್ತಿರುವ ಕಾರಣ ಎಲ್ಲೆಡೆ ಅಶಾಂತಿ ಅತೃಪ್ತಿ ಮತ್ತು ಸ್ವಾರ್ಥ ಮನೋಭಾವ ಬೆಳೆಯುತ್ತಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಅರ್ಥೈಸಿಕೊಂಡು ಬಾಳಿದರೆ ಬಾಳು ಉನ್ನತಿಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಚಲೇರಿ ಹಿರೇಮಠ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಕಳೆದ ಎಂಟು ವರುಷಗಳಿಂದ ಮಠವನ್ನು ಅಭಿವೃದ್ಧಿಪಡಿಸಿದ್ದು ಮರೆಯಲಾರದ ಸಂಗತಿ. ಕಾರ್ಯ ಬಾಹುಳ್ಯದ ಒತ್ತಡದಿಂದಾಗಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ರೇವಣಸಿದ್ಧ ಶಿವಾಚಾರ್ಯರನ್ನು ಆಯ್ಕೆ ಮಾಡಿ ಇಂದು ಸೂತ್ರೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಶಿವಮೂರ್ತಿ ಶ್ರೀಗಳ ತ್ಯಾಗ ನೂತನ ಶ್ರೀಗಳ ಹೊಣೆಗಾರಿಕೆ ಇದ್ದು ಭವಿಷ್ಯತ್ತಿನ ದಿನಗಳಲ್ಲಿ ಶ್ರೀ ಮಠ ಇನ್ನಷ್ಟು ಬೆಳೆಯುವುದರಲ್ಲಿ ಅನುಮಾನವಿಲ್ಲ. ಈ ಭಾಗದ ಶಿಷ್ಯ ಸದ್ಭಕ್ತರು ಮಠದ ಉನ್ನತಿಗೆ ಶ್ರಮಿಸಲು ಸಹಕರಿಸಬೇಕೆಂದು ಬಯಸಿ ಉಭಯ ಶ್ರೀಗಳಿಗೆ ರೇಶ್ಮೆ ಮಡಿ ಫಲ ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ಅಧಿಕಾರ ಹಸ್ತಾಂತರಿಸಿದ ಶಿವಮೂರ್ತಿ ಶ್ರೀಗಳು ಮಾತನಾಡಿ ಮಹಾ ಗುರುವಿನ ಕೃಪಾಶೀರ್ವಾದ ಭಕ್ತರ ಸಹಕಾರದ ಫಲದಿಂದ ಮಠ ಅಭಿವೃದ್ಧಿಗೊಂಡಿದೆ. ನೂತನ ಶ್ರೀಗಳವರ ಕಾಲದಲ್ಲಿ ಹೆಚ್ಚು ಉನ್ನತಿ ಹೊಂದುವುದರಲ್ಲಿ ಸಂಪೂರ್ಣ ವಿಶ್ವಾಸ ನಮಗಿದೆ ಎಂದರು. ನೂತನ ಸೂತ್ರೇಶ್ವರ ಶ್ರೀಗಳು ಮಾತನಾಡಿ ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನ ಹಾಗೂ ಹಿಂದಿನ ಶಿವಮೂರ್ತಿ ಶ್ರೀಗಳ ಪ್ರೇರಣೆಯಂತೆ ವೀರಶೈವ ಧರ್ಮ ಸಂಸ್ಕøತಿ ಗುರು ಪರಂಪರೆಯ ಸಂಸ್ಕøತಿ ಎತ್ತಿ ಹಿಡಿಯಲು ಶ್ರಮಿಸುತ್ತೇವೆ. ತಮ್ಮೆಲ್ಲರ ಸಹಕಾರ ಸೇವಾಭಾವ ಸದಾ ಇರಲೆಂದು ಬಯಸಿದರು. ಜವಳಿ ಗುರುಸಿದ್ಧೇಶ್ವರ ಮಠದ ಶ್ರೀ ಗಂಗಾಧರ ಶ್ರೀಗಳ ಮತ್ತು ಉದ್ಗಿರಿ-ಪಡಸಾವಳಿ ಮಠದ ಶಂಭುಲಿಂಗ ಶ್ರೀಗಳ ಮಾರ್ಗದರ್ಶನದಲ್ಲಿ ಪಟ್ಟಾಧಿಕಾರ ಸಮಾರಂಭ ಅದ್ದೂರಿಯಾಗಿ ಜರುಗಿದ್ದನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಸ್ಮರಿಸಿಕೊಂಡರು. ಆಲೂರು ಸಂಸ್ಥಾನ ಹಿರೇಮಠದ ಸುಶಾಂತ ಶಿವಾಚಾರ್ಯ ಸ್ವಾಮಿಗಳು, ನಂದಗಾಂವ ರಾಜಶೇಖರ ಸ್ವಾಮಿಗಳು, ಲೋಹಾರ ಹಿರೇಮಠದ ನಿಜಲಿಂಗ ಶ್ರೀಗಳು ಉಪದೇಶಾಮೃತವನ್ನಿತ್ತರು. 25ಕ್ಕೂ ಹೆಚ್ಚು ಮಠಾಧೀಶರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಚಂದರರಾವ ಶಂಕರ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಅವರಿಂದ ಪ್ರಾರ್ಥನೆ ಜರುಗಿತು. ಶೇಖರಸ್ವಾಮಿ ನಿರೂಪಿಸಿದರು.

ಹಿಂದಿನ ದಿನ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಅಲಂಕೃತ ಸಾರೋಟದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಂಡರು.