ಕೂಡಲೇ ಶರಣಾಗುವಂತೆ ಪ್ರಜ್ವಲ್ ಗೆ ಸೂಚಿಸಿದ ಹೆಚ್ ಡಿಡಿ?

ಬೆಂಗಳೂರು, ಮೇ.4- ಅಶ್ಲೀಲ ವಿಡಿಯೊಯುಳ್ಳ ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ನಡುವೆ ಪ್ರಕರಣದ ಪ್ರಮುಖ ರೂವಾರಿ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರನ್ನು ವಿದೇಶದಿಂದ ಬಂದು ಕೂಡಲೇ ಪೊಲೀಸರ ಮುಂದೆ ಶರಣಾಗುವಂತೆ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಇಂದು ಗಂಭೀರ ಪ್ರಕರಣದಡಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬಂಧನಕ್ಕೆ ಒಳಗಾಗಿರುವ ಹಿನ್ನೆಲೆ ದೇವೇಗೌಡರು ಈ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಎಸ್ಐಟಿ ತನಿಖಾ ಚುರುಕುಗೊಂಡಿದ್ದು, ಇದರ ನಡುವೆ ಪೆನ್​​​ಡ್ರೈವ್ ಪ್ರಕರಣದ ಆರೋಪಿಯಾಗಿರುವ ಸಂಸದ ಪ್ರಜ್ವಲ್​​ ರೇವಣ್ಣ ವಿದೇಶಕ್ಕೆ ಪರಾರಿಯಾಗಿರುವ ಆರೋಪ ಹೆಚ್ಚಾಗಿದೆ. ಹೀಗಾಗಿ, ಇದರಿಂದ ಕುಟುಂಬಕ್ಕೆ ಮತ್ತಷ್ಟು ಆಘಾತ ಆಗುವುದು ಬೇಡ. ಕೂಡಲೇ ಹೊರಟು ಬಂದು ಪೊಲೀಸರಿಗೆ ಶರಣಾಗಬೇಕು. ವಿಚಾರಣೆಗೆ ಹಾಜರಾಗಿ ಕಾನೂನು ಹೋರಾಟ ನಡೆಸುವಂತೆ ದೇವೇಗೌಡರು ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ, ದೇವೇಗೌಡರ ಸೂಚನೆ ಮೇರೆಗೆ ಪ್ರಜ್ವಲ್ ರೇವಣ್ಣ ನಾಳೆ ಅಥವಾ ನಾಡಿದ್ದು ಬೆಂಗಳೂರಿಗೆ ಬರೋ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ
ಈಗಾಗಲೇ ರಾಜ್ಯದಲ್ಲಿ ಪ್ರಜ್ವಲ್‌ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದ್ದು, ಪಕ್ಷದ ಶಾಸಕರ ಅಸಮಾಧಾನ ಹೊರ ಹಾಕುತ್ತಿದ್ದಾರೆ.