ಕೂಡಲಗಿ ಹತ್ಯೆ ಪ್ರಕರಣ: ನರಿಬೋಳಿ ಸಹೋದರರ ವಿರುದ್ಧ ಪ್ರಕರಣ ರದ್ದತಿಗೆ ಆಗ್ರಹ

ಕಲಬುರಗಿ.ಜೂ.11:ಜೇವರ್ಗಿಯಲ್ಲಿ ಕಳೆದ ಮಂಗಳವಾರ ಹಣಮಂತ್ ಕೂಡಲಗಿ ಹತ್ಯೆ ಪ್ರಕರಣದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಹಾಗೂ ಅವರ ಸಹೋದರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ್ ಪಾಟೀಲ್ ನರಿಬೋಳ್ ಅವರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಕೊಡಲಹಂಗರಗಾ ಅವರು ಶುಕ್ರವಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೀಮಿ ಮರಿಯಮ್ ಜಾರ್ಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಅವರ ಸಹೋದರ ಹಣಮಂತ್ ಕೂಡಲಗಿ ಕೊಲೆ ಪ್ರಕರಣದಲ್ಲಿ ಸುಮಾರು 30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಕುರಿತು ಈಗಾಗಲೇ ಪೋಲಿಸ್ ಇಲಾಖೆಗೆ ಸಂಪೂರ್ಣ ಮಾಹಿತಿ ಇದ್ದು, ಪ್ರಕರಣವು ಹಳೆಯ ವೈಷಮ್ಯದಿಂದ ನಡೆದಿದೆ ಎಂಬುದು ಗೊತ್ತಾಗಿದೆ. ಪ್ರಕರಣದಲ್ಲಿ ಅನಾವಶ್ಯಕವಾಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಬಸವರಾಜ್ ಪಾಟೀಲ್ ನರಿಬೋಳ್ ಅವರೂ ಸೇರಿದಂತೆ ಕೆಲವು ಅಮಾಯಕರ ಹೆಸರುಗಳನ್ನು ಸೇರಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ದುರ್ಬಳಕೆ ಮಾಡುತ್ತಿರುವುದು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ. ಆದ್ದರಿಂದ ಪೋಲಿಸ್ ಇಲಾಖೆಯು ಈ ಕುರಿತು ಪರಿಶೀಲಿಸಿ ನಿಜವಾಗಿಯೂ ಯಾರು ಈ ಪ್ರಕರಣದಲ್ಲಿ ತಪ್ಪಿತಸ್ಥರು ಇದ್ದಾರೆಯೋ ಅವರ ವಿರುದ್ಧ ಉಗ್ರ ಕ್ರಮ ಕೈಗೊಂಡು, ಅಮಾಯಕರ ಹೆಸರುಗಳನ್ನು ರದ್ದುಪಡಿಸಬೇಕು ಎಂದು ಅವರು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಶ್ರೀಶೈಲ್ ಘೂಳಿ, ಕಲ್ಯಾಣಪ್ಪ ಪಾಟೀಲ್ ಮಳಖೇಡ್, ಸುಭಾಷ್ ಬಿಜಾಪುರೆ, ಸಾತಪ್ಪ ಪಟ್ಟಣಕರ್, ಶರಣಗೌಡ ಸಂಕನೂರ್, ಸಂಗಮೇಶ್ ನಾಗನಳ್ಳಿ, ಶರಣು ಪಪ್ಪಾ, ಜಗನ್ನಾಥ್ ಪಟ್ಟಣಶೆಟ್ಟಿ, ಮಂಜು ರೆಡ್ಡಿ, ರಮೇಶ್ ಪಾಟೀಲ್, ಮಹಾಂತೇಶ್ ಪಾಟೀಲ್, ಶರಣು ಖಾನಾಪೂರೆ, ಶಾಂತು ವಾಡೇದ್ ಮುಂತಾದವರು ಉಪಸ್ಥಿತರಿದ್ದರು.