
ನವದೆಹಲಿ,ಏ.೨೬-ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಸ್ತಿ ಪಟುಗಳು ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಕ್ರೀಡಾಪಟುಗಳು ದೇಶದ ಹೆಮ್ಮೆಯಾಗಿದ್ದು, ನಮ್ಮ ಸಹೋದರಿಯರನ್ನು ಬೆಂಬಲಿಸಬೇಕು ಎಂದು ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕ್ರೀಡಾಪಟುಗಳ ಬಗ್ಗೆ ದೇಶವೇ ಹೆಮ್ಮೆ ಪಟ್ಟುಕೊಳ್ಳುತ್ತದೆ ಏಕೆಂದರೆ ಎಷ್ಟೇ ಸವಾಲುಗಳಿದ್ದರೂ ಶ್ರಮದಿಂದ ಪದಕ ಗೆದ್ದಾಗ ಅವರ ಗೆಲುವು ನಮ್ಮದಾಗುತ್ತದೆ ಆ ಕಾರಣಕ್ಕೆ ಇಡೀ ದೇಶವೇ ಸಂತಸದಿಂದ ಬೀಗುತ್ತದೆ ಎಂದು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಬ್ರಿಜ್ ಭೂಷಣ್ ವಿರುದ್ಧ ವಿಚಾರಣೆ ನಡೆಯಲಿದೆ ಎಂದು ಸರ್ಕಾರದ ಅಶ್ವಾಸನೆಯನ್ನು ಕುಸ್ತಿ ಪಟುಗಳು ಬಿಕೊಂಡಿದ್ದರು. ಆದರೆ ಇದುವರೆಗೂ ತನಿಖೆ ನಡೆದಿಲ್ಲ ಹೀಗಾಗಿ ಶಿಕ್ಷೆಯ ಪ್ರಶ್ನೆಯು ಉದ್ಬವಿಸುವುದಿಲ್ಲ ಸರ್ಕಾರ ಆರೋಪಿಗಳನ್ನು ರಕ್ಷಿಸಲು ಮುಂದಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಬಾಲಕಿಯ ನೋವನ್ನು ಆಲಿಸಿದ ವಿಪಕ್ಷ ನಾಯಕರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ ಪ್ರಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ದೇಶದ ಗೌರವ ಹೆಚ್ಚಿಸುವ ಕ್ರೀಡಾಪಟುಗಳ ಬೇಡಿಕೆಯನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದರು.