ಕುಸ್ತಿ ಕಲೆ ಉಳಿಸಿ ಬೆಳೆಸಲು ಕರೆ

ಹೊನ್ನಾಳಿ.ಡಿ.೨೭; ಗಂಡು ಕಲೆ ಕುಸ್ತಿ ಉಳಿದು ಬೆಳೆಯಲು ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹ ಅವಶ್ಯಕ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.ಪಟ್ಟಣದ ದೊಡ್ಡಕೇರಿಯ ಶ್ರೀ ಬೀರಲಿಂಗೇಶ್ವರ ದೇವರ ಕಾರ್ತಿಕೋತ್ಸವ, ಕೆಂಡದರ್ಚನೆ ಮತ್ತು ಮುಳ್ಳುಪಲ್ಲಕ್ಕಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮೂರು ದಿನಗಳ ಬಯಲು ಖಾಟಾ ಜಂಗಿ ಕುಸ್ತಿ ಪಂದ್ಯಾವಳಿಗಳ ಸಮಾರೋಪ ಸಮಾರಂಭದಲ್ಲಿ  ಅವರು ಮಾತನಾಡಿದರು.ಕಾಲ ಬದಲಾದಂತೆ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ನಮ್ಮ ಗ್ರಾಮೀಣ ಸೊಗಡು ಹಾಗೂ ಪ್ರಾಚೀನ ಕುಸ್ತಿ ಕಲೆ ನಶಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ಕುಸ್ತಿಗೆ ಸಾಕಷ್ಟು ವ್ಯಾಯಾಮ, ಅಂಗ ಸಾಧನೆಯ ಅವಶ್ಯಕತೆ ಇದೆ. ಜಾತ್ರೆ, ಸಮಾರಂಭ ಮತ್ತಿತರ ಕಾರ್ಯಕ್ರಮಗಳಿದ್ದ ಸಂದರ್ಭದಲ್ಲಿ ನೇರವಾಗಿ ನಾನು ಅಖಾಡಕ್ಕೆ ಇಳಿಯುತ್ತೇನೆ ಎಂದರೆ ಗೆಲುವು ಅಸಾಧ್ಯ. ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಕುಸ್ತಿಯಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು.ಅನೇಕ ಯುವಕರು ನಮ್ಮ ದೇಸಿ ಆಟಗಳಿಂದ ವಿಮುಖರಾಗುತ್ತಿರುವುದನ್ನು ಇಂದು ಕಾಣುತ್ತಿದ್ದೇವೆ. ಇದು ಶುದ್ಧ ತಪ್ಪು. ನಮ್ಮತನವನ್ನು ನಾವು ಹೇಗೆ ಬಿಟ್ಟುಕೊಡುವುದಿಲ್ಲವೋ ಅದೇ ರೀತಿ ನಮ್ಮ ಸಂಪ್ರದಾಯ, ಸಂಸ್ಕೃತಿಯಿಂದ ನಾವು ಹಿಂದೆ ಸರಿಯಬಾರದು ಎಂದು ಅಭಿಪ್ರಾಯಪಟ್ಟರು.ಕುಸ್ತಿ ಕಮಿಟಿ ಅಧ್ಯಕ್ಷ ಎಚ್.ಡಿ. ವಿಜೇಂದ್ರಪ್ಪ, ಪಪಂ ಸದಸ್ಯರಾದ ಧರ್ಮಪ್ಪ, ರಂಗನಾಥ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ವಿ. ಚನ್ನಪ್ಪ, ಎಪಿಎಂಸಿ ನಿರ್ದೇಶಕ ಮಾದೇನಹಳ್ಳಿ ಎಂ. ಸೋಮಶೇಖರ್, ಮುಖಂಡರಾದ ಬಿಸಾಟಿ ಸುರೇಶ್, ಪಾಲಾಕ್ಷಪ್ಪ, ನಾಗರಾಜ್, ಶ್ರೀ ಬೀರಲಿಂಗೇಶ್ವರ ಟ್ರಸ್ಟ್ ಕಮಿಟಿಯ ಸದಸ್ಯರು, ಮಾಜಿ ಸೈನಿಕ ಎಂ. ವಾಸಪ್ಪ ಮತ್ತಿತರರು ಉಪಸ್ಥಿತರಿದ್ದರು.