ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ: ಬ್ರಿಜ್‍ಭೂಷಣಸಿಂಗ್ ಪ್ರತಿಕೃತಿ ದಹಿಸಿ ಪ್ರತಿಭಟನೆ

ಕಲಬುರಗಿ, ಜೂ 05 : ಭಾರತದ ಹೆಸರನ್ನು ಹೆಮ್ಮೆಯಿಂದ ತಲೆಎತ್ತುವಂತೆ ಮಾಡಿರುವ ಮಹಿಳಾ ಕುಸ್ತಿಪಟುಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯವು ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಮ್‍ಎಸ್) ಜಿಲ್ಲಾ ಕಾರ್ಯದರ್ಶಿ ಕಾ. ಮಹೇಶ್ ಎಸ್. ಬಿ. ಅವರು ಖೇದ ವ್ಯಕ್ತಪಡಿಸಿದರು.
ಸೋಮವಾರ ದೌರ್ಜನ್ಯಕ್ಕೆ ಕಾರಣನಾದ ದೆಹಲಿಯ ಬಿಜೆಪಿ ಸಂಸದ ಬ್ರಿಜ್‍ಭೂಷಣ್ ಸಿಂಗ್ ಅವರನ್ನು ಬಂಧಿಸಲು ಒತ್ತಾಯಿಸಿ ದೇಶವ್ಯಾಪಿ ಕರೆಯ ಮೇರೆಗೆ ಸಂಯುಕ್ತ ಕಿಸಾನ್ ಮೋರ್ಚಾದ ಕರೆಗೆ ಸ್ಪಂಧಿಸಿ ಸಂಘಟನೆಯ ಪರವಾಗಿ ತಾಲ್ಲೂಕಿನ ಭೀಮಳ್ಳಿ ಗ್ರಾಮದಲ್ಲಿ ಬ್ರಿಜ್‍ಭೂಷಣ್ ಸಿಂಗ್ ಅವರ ಭಾವಚಿತ್ರವನ್ನು ದಹಿಸಿ ಮಾತನಾಡಿದ ಅವರು, ದೆಹಲಿಯ ಜಂತರ್ ಮಂತರ್‍ನಲ್ಲಿ ಕಳೆದ ನಾಲ್ಕು ತಿಂಗಳಿಂದಲೂ ನಡೆಯುತ್ತಿರುವ ಪ್ರತಿಭಟನೆಯು ದೇಶದ ಆತ್ಮಸಾಕ್ಷಿಯನ್ನೇ ಕಲುಕಿದೆ. ಇಂದು ದೇಶದ ನಾನಾ ಕಡೆಗಳಿಂದ ಆ ಧೀರ ಮಹಿಳಾ ಕ್ರೀಡಾಪಟುಗಳ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಆರೋಪಿಯ ಮೇಲೆ ಪೋಕ್ಸೋದಂತಹ ಗಂಭೀರ ಕಾನೂನು ಅನ್ವಯವಾದರೂ ಅವರನ್ನು ಬಂಧಿಸದೇ ಇರುವ ಸರ್ಕಾರದ ನಡೆಯು ತೀವ್ರ ಜನಾಕ್ರೋಶಕ್ಕೆ ಎಡೆ ಮಾಡಿಕೊಡುತ್ತಿದೆ. ಇಂದು ನ್ಯಾಯಕ್ಕಾಗಿ ಹೋರಾಡುತ್ತಿರುವವರ ಆಕ್ರೋಶವು ಭುಗಿಲೆದ್ದು ದೇಶದ ಜನರ ಸಹನೆಯ ಕಟ್ಟೆಯೊಡೆದು ಹೋಗುವ ಮುನ್ನ ಸರ್ಕಾರವು ಸಂಸದನನ್ನು ಬಂಧಿಸಿ ನಿದರ್ಶನೀಯ ಶಿಕ್ಷೆ ನೀಡಬೇಕು. ಆ ನಿಟ್ಟಿನಲ್ಲಿ ದೇಶದ ಸಮಸ್ಥ ಜನತೆ ಅದರಲ್ಲಿಯೂ ಗ್ರಾಮೀಣ ಜನತೆ, ರೈತರು ಹೋರಾಟದೊಂದಿಗೆ ಮಹಿಳಾ ಕ್ರೀಡಾಪಟುಗಳ ಜೊತೆಗೆ ನಿಂತು ಹೋರಾಟವನ್ನು ಗೆಲ್ಲಿಸಬೇಕೆಂದು ಅವರು ಕರೆ ನೀಡಿದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಕಾ. ವಿಶ್ವನಾಥ್ ಸಿಂಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭೀಮಾಶಂಕರ್ ಆಂದೋಲಾ, ಸಚಿನ್ ಸಿಂಗೆ, ತಿಪ್ಪಣ್ಣ ಮುಗಳಿ, ಹಣಮಂತ್ ಪಟ್ಟಣ್, ರವೀಂದ್ರ ಹಕೀಮ್, ಮಹಾದೇವಿ ತುಳಜಪ್ಪ, ಭಾರತಬಾಯಿ ಲಕ್ಷ್ಮಣ್, ಲಕ್ಷ್ಮೀಬಾಯಿ ಚಂದ್ರಶಾ, ಶೋಭಾ ರಾಮಚಂದ್ರ ಮುಂತಾದವರು ಪಾಲ್ಗೊಂಡಿದ್ದರು.