ಕುಸ್ತಿಪಟುಗಳ ಪ್ರತಿಭಟನೆ: ಬ್ರಿಜ್‌ಭೂಷಣ್ ಬಂಧನಕ್ಕೆ ಆಗ್ರಹ

ರಾಯಚೂರು, ಮೇ.೧೮- ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಬಂಧನ ಮಾಡಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸಿಐಟಿಯು ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಲೈಂಗಿಕ ಕಿರುಕುಳ ಆರೋಪದಡಿ ಬ್ರಿಜ್‌ಭೂಷಣ್ ಶರಣ್ ಅವರನ್ನು ಕೂಡಲೇ ಬಂಧಿಸಿ ಕುಸ್ತಿಪಟ್ಟುಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ನಿರ್ಲಕ್ಷ ಮುಂದುವರಿಸಿದ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಓಲಂಪಿಕ್ ಪದಕ ವಿಜೇತರು, ವಿಶ್ವ ಚಾಂಪಿಯನ್ ಕುಸ್ತಿಪಟುಗಳು ಸೇರಿದಂತೆ ದೇಶದ ಹೆಮ್ಮೆಯ ಕ್ರೀಡಾಪಟುಗಳು ಲೈಂಗಿಕ ಕಿರುಕುಳದ ವಿರುದ್ಧ ೨೦೨೩ ಎಪ್ರೀಲ್ ೨೪ ರಿಂದ ನವದೆಹಲಿಯ ಜಂತರ್ ಮಂತರ್ ನಲ್ಲಿ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಸ್ತಿಪಟುಗಳ ಪ್ರತಿಭಟನೆಗೆ ಕೇಂದ್ರದ ಬಿಜೆಪಿ ಸರ್ಕಾರ ಸ್ಪಂದಿಸುತ್ತಿಲ್ಲ ಪೊಲೀಸ್ ದೂರು ನೀಡಿದ್ದರೂ ಎಫ್.ಐ.ಆರ್. ದಾಖಲೆ ಆಗಿರಲಿಲ್ಲ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರವಷ್ಟೆ ಎಫ್.ಐ.ಆರ್. ದಾಖಲಾಗಿದೆ. ಈ ಪ್ರತಿಭಟನಾ ಕುಸ್ತಿಪಟುಗಳು ತಮ್ಮ ಮೇಲಾಗಿರುವ ಲೈಂಗಿಕ ಕಿರುಕುಳ ಹಾಗೂ ಹಿಂಸೆ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಮಾತ್ರ ಕೇಳುತ್ತಿದ್ದಾರೆ. ಹಾಗೂ ಕುಸ್ತಿಪಟುಗಳ ಆರೋಪದ ಹಿನ್ನಲ್ಲೆಯಲ್ಲಿ ರಚಿಸಲಾದ ವಿಚಾರಣಾ ಸಮಿತಿಯ ವರದಿಯನ್ನು ಸಾರ್ವಜನಿಕರ ಅವಗಾಹನೆಗೆ ತರಬೇಕೆಂದು ಆಗ್ರಹಿಸುತ್ತಿದ್ದಾರೆ.
ಆರೋಪಿ ಬಿಜೆಪಿ ಸಂಸದನನ್ನು ರಕ್ಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ದೂರಿನ ಆಧಾರದಲ್ಲಿ ಕಾನೂನು ಕ್ರಮ ಜರುಗಿಸಿ ನೊಂದ ಮಹಿಳಾ ಕ್ರೀಡಾಪಟುಗಳಿಗೆ ರಕ್ಷಣೆ ಒದಗಿಸಬೇಕಾಗಿದ್ದ ಬಿಜೆಪಿ ನೇತೃತ್ವದ ಸರ್ಕಾರ ತನ್ನ ಪೊಲೀಸ್ ಪಡೆಗಳನ್ನು ಬಳಸಿ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕ್ರೀಡಾಪಟುಗಳ ಮೇಲೆ ದಮನಕಾರಿ ನೀತಿಗಳನ್ನು ಅನುಸರಿಸುತ್ತಿದೆ.
ಲೈಂಗಿಕ ಕಿರುಕುಳ ಹಾಗೂ ಹಿಂಸೆ ಕೊನೆಗಾಣಬೇಕು. ದೇಶಕ್ಕೆ ಕೀರ್ತಿ ತರುವ ಸಾಮರ್ಥ್ಯದ ಕ್ರೀಡಾಪಟುಗಳ ಆತ್ಮಸ್ಥೆರ್ಯ ಕುಂದಿಸುವ ಕೆಲಸವನ್ನು ಕೂಡಲೇ ಬಿಜೆಪಿ ಸರ್ಕಾರ ನಿಲ್ಲಸಬೇಕು. ಈ ಕೂಡಲೇ ಪೋಸ್ಕೋ ಸೇರಿದಂತೆ ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಿಂಸೆ ನಡೆಸಿರುವ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ ಸಿಂಗ್‌ನನ್ನು ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷಸ್ಥಾನದಿಂದ ಕಿತ್ತುಹಾಕಿ ಬಂಧಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೆಚ್ ಪದ್ಮಾ, ಕರಿಯಪ್ಪ ಹಚ್ಚೋಳಿ, ಕೆ.ಜಿ ವಿರೇಶ, ವರಲಕ್ಷ್ಮಿ, ಗೋಕರಮ್ಮ, ಕೆ. ಮಲ್ಲೇಶ, ವೆಂಕಟೇಶ ಲಕ್ಷ್ಮಿ, ಸೇರಿದಂತೆ ಉಪಸ್ಥಿತರಿದ್ದರು.