ಕಲಬುರಗಿ:ಜೂ.2: ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಬ್ರಿಜ್‍ಭೂಷಣ್ ಶರಣಸಿಂಗ್ ಅವರನ್ನು ಪೋಕ್ಸೋ ಪ್ರಕರಣದಡಿ ಬಂಧಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಸಂವಿಧಾನಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ಒಲಂಪಿಕ್ಸ್ ಕ್ರೀಡೆಗಳು ವಿಶ್ವಮಟ್ಟದ ವಿಖ್ಯಾತ ಕ್ರೀಡಾ ಸ್ಪರ್ಧೆಗಳನ್ನು ನಡೆಸುತ್ತಿದ್ದು, ಅಂತಹ ಪ್ರಾಪಂಚಿಕ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದು ರಾಷ್ಟ್ರದ, ಕ್ರೀಡಾ ಜಗತ್ತಿನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ವಿನೇಶ್ ಪೋಗಾಟ್, ಸಾಕ್ಷಿ ಮಲ್ಲಿಕ್ ಮತ್ತು ಇನ್ನಿತರ ಕುಸ್ತಿ ಪಟುಗಳ ಮೇಲೆ ರಾಷ್ಟ್ರೀಯ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಬ್ರಿಜ್‍ಭೂಷಣ್ ಶರಣಸಿಂಗ್ ಅವರು ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ನಡೆಸಿದ್ದಾರೆಂದು ಸುಪ್ರಿಂಕೋರ್ಟ್‍ಗೆ ದೂರು ಸಲ್ಲಿಸಿ, ಎಫ್‍ಐಆರ್ ದಾಖಲಿಸಿದರೂ ಇಲ್ಲಿಯವರೆಗೆ ಆರೋಪಿಯನ್ನು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೋಪಿಯ ಬಂಧನಕ್ಕೆ ಒತ್ತಾಯಿಸಿ ಸಂತ್ರಸ್ತ ಕ್ರೀಡಾಪಟುಗಳು ಕಳೆದ ಒಂದು ತಿಂಗಳಿನಿಂದ ದೆಹಲಿಯ ಜಂತರ್- ಮಂತರ್‍ನಲ್ಲಿ ಪ್ರತಿಭಟನೆ ಮಾಡುತ್ತಿರುವುದು ಇಡೀ ವಿಶ್ವಕ್ಕೆ ಗೊತ್ತಾಗಿದೆ. ಆ ಹೋರಾಟವನ್ನು ಬೆಂಬಲಿಸುವುದಾಗಿ ತಿಳಿಸಿದ ಅವರು, ರಾಷ್ಟ್ರಪತಿಗಳು ಕೂಡಲೇ ಮಧ್ಯ ಪ್ರವೇಶಿಸಿ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರೊ. ಆರ್.ಕೆ. ಹುಡಗಿ, ದತ್ತಾತ್ರೇಯ್ ಇಕ್ಕಳಕಿ, ಅಶ್ವಿನಿ ಮದನಕರ್, ಮಹಾಂತೇಶ್ ನವಲಕರ್, ಮೋಹನ್ ಕಟ್ಟಿಮನಿ ಮುಂತಾದವರು ಪಾಲ್ಗೊಂಡಿದ್ದರು.