ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಬ್ರಿಜ್‍ಭೂಷಣ್‍ಸಿಂಗ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ.ಜೂ 01: ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ಬೆಂಬಲಿಸಿ, ಬಿಜೆಪಿ ಸಂಸದ ಬ್ರಿಜ್‍ಭೂಷಣ ಸಿಂಗ್ ಬಂಧನಕ್ಕೆ ಆಗಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಪ್ರಮುಖರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಕಳೆದ ಒಂದು ತಿಂಗಳಿನಿಂದ ದೇಶದ ಹೆಸರಾಂತ ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ವಿನೇಶಾ ಪೋಗಟ್, ಬಜರಂಗ್ ಪೂನಿಯಾ ಹಾಗೂ ಇತರರು ಭಾರತೀಯ ಕುಸ್ತಿಪಟುಗಳ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಹಾಗೂ ತರಬೇತಿದಾರರಿಂದ ನಡೆದ ಲೈಂಗಿಕ ಕಿರುಕುಳದ ವಿರುದ್ಧ ಹಾಗೂ ಆತನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಆ ಪ್ರತಿಭಟನೆಗೆ ದೇಶದ ಹಲವಾರು ಚಿಂತಕರು, ಹೋರಾಟಗಾರರು, ಸಂಘಟನೆಗಳು ಹಾಗೂ ಜನತೆ ಬೆಂಬಲಿಸಿದ್ದಾರೆ. ಆದಾಗ್ಯೂ, ಸರ್ಕಾರ ಆತನಿಗೆ ಬಂಧಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಹೋರಾಟಕ್ಕೆ ಬೆಂಬಲವಾಗಿ ಶನಿವಾರ ದೆಹಲಿಯಲ್ಲಿ ಹೋರಾಟಗಾರರು ಮಹಿಳಾ ಮಹಾ ಪಂಚಾಯಿತಿ ಕರೆದಿದ್ದರು. ಆದಾಗ್ಯೂ, ಬೆಳಿಗ್ಗೆ ದೆಹಲಿ ಪೋಲಿಸರು ಆ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸುಭಾಷಿನಿ ಅಲಿ, ಜಗಮತಿ ಸಂಘವಾನ್, ಮೆಹಮುನ್ನಾ ಮುಲ್ಲಾ ಅವರನ್ನು ಬಂಧಿಸಲಾಗಿದೆ. ಇದರೊಟ್ಟಿಗೆ ಇತರೆ ಮಹಿಳಾ ಸಂಘಟಕರನ್ನು ಅಕ್ರಮವಾಗಿ ಬಂಧಿಸಿದ್ದಾರೆ. ವಿಶ್ವದಲ್ಲಿ ಎಲ್ಲಿಯೂ ನಡೆಯದ ದುಷ್ಕರ್ಮವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಇದೆಲ್ಲವೂ ಭಾರತವನ್ನು ವಿಶ್ವದ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ ಎಂದು ಅವರು ಕಿಡಿಕಾರಿದರು.
ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಸರ್ಕಾರದ ನಡೆ ಉಗ್ರ ಖಂಡನಾರ್ಹ. ತಕ್ಷಣವೇ ಕುಸ್ತಿ ಪಟುಗಳನ್ನು ಬಿಡುಗಡೆ ಮಾಡಿ ಕ್ರೀಡಾ ಒಕ್ಕೂಟದ ಅಧ್ಯಕ್ಷ ಹಾಗೂ ಸಂಸದ ಬ್ರಿಜ್‍ಭೂಷಣಸಿಂಗ್ ಅವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಕುಸ್ತಿಪಟುಗಳು ಮತ್ತು ಇತರೆ ಹೋರಾಟಗಾರರ ಮೇಲೆ ಹಾಕಿದ ಎಫ್‍ಐಆರ್‍ಗಳನ್ನು ರದ್ದು ಮಾಡಿ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ನೂತನ ಸಂಸತ್ ಉದ್ಘಾಟನೆಯ ಸಂದರ್ಭದಲ್ಲಿ ಪ್ರತಿಭಟನೆಕಾರರೊಂದಿಗೆ ಅನಾಗರಿಕರಂತೆ ವರ್ತಿಸಿದ ಪೋಲಿಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಮೌಲಾಮುಲ್ಲಾ, ಕೆ. ನೀಲಾ, ಡಾ. ಮೀನಾಕ್ಷಿಬಾಳಿ, ನಾಗೇಂದ್ರ, ಭೀಮಾಶ0ಕರ್ ಮಾಡಿಯಾಳ್, ಡಾ. ಸಾಯಬಣ್ಣ ಗುಡುಬಾ ಮುಂತಾದವರು ಪಾಲ್ಗೊಂಡಿದ್ದರು.