ಕುಸ್ತಿಪಟುಗಳಿಗೆ ಎಐಎಂಎಸ್‌ಎಸ್ ಬೆಂಬಲ

ಬೆಂಗಳೂರು, ಮೇ.೨೯-ಮಹಿಳಾ ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ನೂತನ ಸಂಸತ್ ಭವನದ ಎದುರು ನಡೆಯಬೇಕಿದ್ದ ಮಹಿಳಾ ಮಹಾಪಂಚಾಯತ್ ಹೋರಾಟ ಭಂಗಗೊಳಿಸುವ ಉದ್ದೇಶದಿಂದ ವಿವಿಧ ಸಂಘಟನೆಯ ಮುಖಂಡರು ಹಾಗೂ ಮಹಿಳಾ ಕುಸ್ತಿಪಟುಗಳನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಎಐಎಂಎಸ್‌ಎಸ್ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ದೆಹಲಿ ಎಐಎಂಎಸ್ ರಾಜ್ಯ ಕಾರ್ಯದರ್ಶಿ ರಿತು ಕೌಶಿಕ್ ಹಾಗೂ ಎಐಕೆಕೆ ಎಂ ಎಸ್ ರೈತ ಸಂಘಟನೆಯ ಹರಿಯಾಣ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಜೈಕರಣ ಮಂಡೋತಿ , ಎಸ್‌ಯುಸಿಐ ಹರಿಯಾಣ ರಾಜ್ಯ ಸಮಿತಿಯ ಪ್ರಮುಖ ಸದಸ್ಯ ರಾಜೇಂದರ್ ಸಿಂಗ್ ಅವರನ್ನು ಬಂಧಿಸಿರುವ ದೆಹಲಿ ಪೊಲೀಸರ ಅಪ್ರಜಾತಾಂತ್ರಿಕ ಹಾಗೂ ದಮನಕಾರಿ ನೀತಿಯನ್ನು ಸಂಘಟನೆಯು ಬಲವಾಗಿ ಖಂಡಿಸುತ್ತಿದೆ.

ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಈ ಕೂಡಲೇ ಬಂಧಿಸಬೇಕು ಎಐಎಂಎಸ್‌ಎಸ್ ರಾಜ್ಯ ಅಧ್ಯಕ್ಷರಾದ ಅಪರ್ಣ ಬಿ.ಆರ್. ಆಗ್ರಹಿಸಿದರು.

ಇಂತಹ ದಾಳಿಯನ್ನು ಹಿಮ್ಮೆಟ್ಟಿಸಲು ರಾಜ್ಯದ ಜನತೆ, ವಿದ್ಯಾರ್ಥಿಗಳು ಮತ್ತು ಎಲ್ಲ ಪ್ರಗತಿಪರ ಚಿಂತನೆಯುಳ್ಳ ನಾಗರಿಕರು ಒಂದಾಗಿ, ಪ್ರತಿರೋಧ ಚಳುವಳಿಯನ್ನು ಬೆಳೆಸುತ್ತಾ ಮತ್ತು ಹೋರಾಟನಿರತ ಕುಸ್ತಿ ಪಟುಗಳ ಚಳುವಳಿಗೆ ಬೆಂಬಲ ಸೂಚಿಸಬೇಕು ಎಂದು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಲೈಂಗಿಕ ಕಿರುಕುಳದ ಆರೋಪ ಮತ್ತು ಪೋಸ್ಕೊ ಕಾಯ್ದೆಯಡಿ ಅಪರಾಧಿ ಆಗಿರುವ ಬಿಜೆಪಿ ಸಂಸದನ ರಕ್ಷಣೆಗೆ ಬಿಜೆಪಿ ಸರ್ಕಾರವು ಬದ್ಧವಾಗಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಪ್ರಜಾತಾಂತ್ರಿಕ ಹಕ್ಕುಗಳ ಮೇಲಿನ ಈ ದಾಳಿಯನ್ನು ಎಐಎಂಎಸ್‌ಎಸ್ ಉಗ್ರವಾಗಿ ಖಂಡಿಸುತ್ತದೆ ಮತ್ತು ಹೋರಾಟಕ್ಕೆ ಸಂಬಂಧಪಟ್ಟ ಎಲ್ಲ ನಾಯಕರುಗಳನ್ನು ಈ ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.