ಕುಸುನೆ ಬೆಳೆ: ಕೀಟನಾಶಕ್ಕೆ ಮಾಹಿತಿ

ಗದಗ, ನ. 22 : ಗದಗ ಜಿಲ್ಲೆಯ ವಿವಿದೆಡೆ ಹಿಂಗಾರು ಹಂಗಾಮಿನಲ್ಲಿ ಬೆಳೆದ ಕುಸುಬೆ ಬೆಳೆಗೆ ಬೂದು ಬಣ್ಣದ ಮೂತಿ ಹುಳುವಿನ ಬಾಧೆ ಕಂಡು ಬಂದಿದ್ದು ಇವುಗಳ ಹತೋಟಿಗೆ ಬೆಳೆಯ ಮೇಲೆ ಕಾಣಿಸುವ ಪ್ರೌಢ ಕೀಟಗಳನ್ನು ಆರಿಸಿ ನಾಶಪಡಿಸುವುದು ಸೂಕ್ತ ಕ್ರಮವಾಗಿದೆ ಎಂದು ಗದುಗಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಕೀಟಶಾಸ್ತ್ರಜ್ಞರಾದ ಡಾ.ಸಿ.ಎಂ.ರಫಿ ಹಾಗೂ ವಿಜ್ಞಾನಿ ಡಾ.ಎಸ್.ಎಲ್.ಪಾಟೀಲ ರೈತರಿಗೆ ಸಲಹೆ ನೀಡಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳು, ರೈತರು ಹಾಗೂ ಕೃಷಿ ಪರಿಕರ ಮಾರಾಟಗಾರರೊಂದಿಗೆ ಕುಸುಬೆ ಬೆಳೆ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಗಜೇಂದ್ರಗಡ ತಾಲೂಕಿನ ನಿಡಗುಂದಿ, ಹಾಲಕೆರೆ, ನರೇಗಲ್ಲ, ತೋಟಗಂಟಿ, ಅಬ್ಬಿಗೇರಿ ಸೇರಿದಂತೆ ಮುಂತಾದ ಗ್ರಾಮಗಳ ಕೃಷಿ ಭೂಮಿಯಲ್ಲಿ ಈ ಕೀಟ ಬಾಧೆ ಕಂಡು ಬಂದಿದ್ದು ಇದರಿಂದ ರೈತರು ತೀವ್ರ ಚಿಂತೆಗೀಡಾಗಿದ್ದಾರೆ.
ಬಾಧೆ : ಮಿಲ್ಲೋಸೆರಸ್ ಪ್ರಬೇಧಕ್ಕೆ ಸೇರಿರುವ ವಿವಿದ ಜಾತಿಯ ಪ್ರೌಢ ಮೂತಿ ಹುಳುಗಳು ಕಂದು ಹಾಗೂ ಕಪ್ಪು-ಹಸಿರು ಬಣ್ಣದಿಂದ ದೂಡಿದ್ದು ಕುಸುಬೆ ಸಸ್ಯದ ಎಲೆಗಳನ್ನು ‘ಗಿ’ ಆಕಾರದಲ್ಲಿ ತಿನ್ನುತ್ತವೆ ಹಾಗೂ ಈ ಪ್ರೌಢ ಹುಳುಗಳು ಸಸಿಯ ಬೆಳೆಯುತ್ತಿರುವ ಕುಡಿ ಭಾಗವನ್ನು ತಿನ್ನುವುದರಿಂದ, ಈ ಕೀಟದ ಮರಿ ಹುಳುಗಳು ಚಿಕ್ಕದಾಗಿದ್ದು ಮಣ್ಣಿನಲ್ಲಿನ ಬೇರುಗಳನ್ನು ತಿನ್ನುವುದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಂಡು ಬೆಳೆ ಒಣಗುತ್ತದೆ.
ಪ್ರೌಢ ಹಾಘೂ ಮರಿ ಕೀಟಗಳು ಕುಸುಬೆಯ ಒಂದು ತಿಂಗಳ ಸಸಿಯನ್ನು ಅಕ್ರಮಣ ಮಾಡುವುದರಿಂದ ಬೆಳೆ ಸಂಪೂರ್ಣವಾಗಿ ನಾಶವಾಗಿ ರೈತರು ಬಾಧಿತ ಬೆಳೆಯನ್ನು ಮುರಿದು ನಂತರ ಹಿಂಗಾರಿ ಕಡಲೆ ಬೆಳೆದ ನಿದರ್ಶನಗಳಿವೆ.
ಹತೋಟಿ : ಬೆಳೆಯ ಮೇಲೆ ಕಾಣಿಸುವ ಕೀಟಗಳನ್ನು ಆರಿಸಿ ನಾಶಪಡಿಸುವುದು ಸೂಕ್ತ. ಅಸಿಪೇಟ್ 1.0 ಗ್ರಾ, ಥೈಯಾಮೆಥಾಕ್ಸಮ್ 0.30 ಮಿ.ಲೀ ಕ್ಲೋರ್‍ಪೈರಿಫಾಸ್ 2.0 ಮೀ, ಲ್ಯಾಂಬ್ಡಾಸಿಹಾಲೋಥ್ರೀನ್ 1.0 ಮಿ.ಲೀ ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಸಂಯುಕ್ತ ಕೀಟನಾಶಕಗಳನ್ನು ಪ್ರತಿ ಲೀಟರ್ ನೀರಿಗೆ 1.0 ಮಿ.ಲೀ ನಂತೆ ಸಿಂಪಡಿಸಬೇಕು. ಸಾಧ್ಯವಾದಷ್ಟು ಸಸಿ ತೊಯ್ಯುವಂತೆ ಹಾಗೂ ಸಂಜೆ ಸಮಯದಲ್ಲಿ ಸಿಂಪರಣೆ ಕೈಗೊಳ್ಳುವುದು ಸೂಕ್ತ ನೀರಿನ ಅನಾನುಕೂಲವಿದ್ದಲ್ಲಿ ಹೆಕ್ಟೇರಿಗೆ 25 ಕೆಜಿ ಪುಡಿ ರೂಪದ ಕೀಟನಾಶಕ ಬಳಸಬೇಕು.
ಪ್ರತಿ ವರ್ಷ ನಿರಂತರವಾಗಿ ಈ ಕೀಟದ ಬಾದೆ ಇರುವ ಪ್ರದೇಗಳಲ್ಲಿ ಬೇವಿನ ಹಿಂಡಿ 500 ಕಿ.ಗ್ರಾ ಅಥವಾ ಕ್ಲೋರ್‍ಪೈರಿಪಾಸ್ 10 ಜಿ 25 ಕೆಜಿ ಅಥವಾ ಪುಡಿ ರೂಪದ ಕೀಟನಾಶಕ 25 ಕಿ.ಗ್ರಾ ಪ್ರತಿ ಹೆಕ್ಟೇರ್‍ಗೆ ಬಿತ್ತನೆ ಪೂರ್ವ ಮಣ್ಣಿನಲ್ಲಿ ಬೆರೆಸಬೇಕು.
ಪ್ರತಿ ವರ್ಷ ಈ ಕೀಟದ ಬಾದೆ ಹೆಚ್ಚಿರುವ ಪ್ರದೇಶಗಳಲ್ಲಿ ಕುಸುವೆ ಬೆಳೆ ಬದಲು ಕಡಲೆ, ಜೋಳ, ಗೋಧಿ ಮುಂತಾದ ಹಿಂಗಾರಿ ಬೆಳೆಗಳನ್ನು ಬೆಳೆದು ಬೆಳೆ ಪರಿವರ್ತನೆ ಮಾಡುವದು ತುಂಬಾ ಉತ್ತಮ ವಿಧಾನವಾಗಿದೆ. ರೈತರು ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಗದುಗಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಗದುಗಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಕೀಟಶಾಸ್ತ್ರಜ್ಞರಾದ ಡಾ.ಸಿ.ಎಂ.ರಫಿ ರೈತ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.