ಕುಸಿಯುತ್ತಿರುವ ಮೌಲ್ಯಗಳು ಪುನರ್ ಸ್ಥಾಪಿತವಾಗಲಿ: ಡಾ. ರಾಬಿಯಾ ಮಿರ್ದೆ

ವಿಜಯಪುರ :ಆ.8: ಯುವ ಪೀಳಿಗೆಯಲ್ಲಿ ಕುಸಿಯುತ್ತಿರುವ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನು ಪುನರ್‍ಸ್ಥಾಪನೆಗೊಳಿಸುವ ಅವಶ್ಯಕತೆ ಇದೆ. ಅದಕ್ಕಾಗಿ ಶರಣ ಸಾಹಿತ್ಯ ಪರಿಷತ್ತಿನಂತಹ ಸಾಹಿತ್ಯಿಕ ಸಂಸ್ಥೆಗಳು ದತ್ತಿ ಉಪನ್ಯಾಸಗಳನ್ನು ನಡೆಸಬೇಕೆಂದು ಎಸ್.ಬಿ. ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯಗಳ ಪ್ರಾಚಾರ್ಯ ಡಾ. ರಾಬಿಯಾ ಮಿರ್ದೆ ಅವರು ಹೇಳಿದರು.

ಅವರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಮಹಿಳಾ ಕದಳಿ ವೇದಿಕೆ, ಕನ್ನಡ ವಿಭಾಗ ಮತ್ತು ಎಂ.ಎ. ಇಂಗ್ಲೀಷ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿದರು.

ಡಾ. ಸಂಗಮೇಶ ಮೇತ್ರಿ ಅವರು ಜೇಡರ ದಾಸಮಯ್ಯ ಮತ್ತು ಬಸವಣ್ಣನವರ ವಚನಗಳಲ್ಲಿ ತಾತ್ವಿಕ ಚಿಂತನೆಗಳನ್ನು ಕುರಿತು ಉಪನ್ಯಾಸ ನೀಡಿದರು. ಈ ಶರಣರ ವಚನಗಳಲ್ಲಿ ತಾತ್ವಿಕ ಆಲೋಚನೆಗಳು ಒಂದೇ ಸ್ವರೂಪದ್ದಾಗಿವೆ. ಅವು ಸಮಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಉಪನ್ಯಾಸಕರಾದ ಜಂಬುನಾಥ ಕಂಚ್ಯಾಣಿ ಅವರು ದತ್ತಿ ಸ್ಮರಣೆಯನ್ನು ಮಾಡುತ್ತ ಧರ್ಮದ್ರಷ್ಟಾರ ಹರ್ಡೇಕರ ಮಂಜಪ್ಪನವರ ಜೀವನ ಸಾಧನೆ ಕುರಿತು ಮಾತನಾಡಿದರು. ಅವರು ಗಾಂಧೀಜಿಯವರನ್ನು ಕನ್ನಡಿಗರಿಗೆ ಪರಿಚಯಿಸಿ ಜನರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸದರೆಂದು ಹೇಳಿದರು.

ಸಾಹಿತಿ ಮಹಾಂತ ಗುಲಗಂಜಿ ಹಾಗೂ ವಿಠ್ಠಲ ತೇಲಿ ಅವರು ನೀಡಿದ ದತ್ತಿ ಕಾರ್ಯಕ್ರಮದಲ್ಲಿ ಪ್ರೋ. ಎ.ಬಿ. ಪಾಟೀಲ, ಸಿದ್ಧರಾಮ ತೇಲಿ ಮತ್ತು ಸುರೇಖಾ ತೇಲಿ ಉಪಸ್ಥಿತರಿದ್ದರು.

ಕದಳಿ ವೇದಿಕೆಯ ಅಧ್ಯಕ್ಷೆ ಡಾ. ಉಷಾದೇವಿ ಹಿರೇಮಠ ಸ್ವಾಗತಿಸಿದರು. ಡಾ. ಶ್ರೀನಿವಾಸ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ವಿದ್ಯಾ ಪಾಟೀಲ ವಂದಿಸಿದರು. ಶ್ವೇತಾ ಸವಣೂರ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಕಡಿ ಹಾಗೂ ಸಂಗಡಿಗರು ವಚನಗಾಯನ ಮಾಡಿದರು.

ಸಮಾರಂಭದಲ್ಲಿ ಪ್ರೊ. ಕೊಣ್ಣೂರ, ಪ್ರೊ. ಎಸ್.ಎಚ್. ಹೂಗಾರ, ಡಾ. ಚೇತನಾ ಸಂಕೊಂಡ, ಎಸ್.ವಾಯ್. ಅಂಗಡಿ, ಪರಶುರಾಮ ಪೋಳ, ಬಿ.ಕೆ. ಗೊಟ್ಯಾಳ ಮುಂತಾದವರು ಉಪಸ್ಥಿತರಿದ್ದರು.