ಕುಸಿದ ಭತ್ತದ ಇಳುವರಿ ರೈತರಿಗೆ ನಿರಾಸೆ

• ಆತಂಕದಲ್ಲಿ ಅನ್ನದಾತರು
• ತಳಮಟ್ಟಕ್ಕೆ ಇಳಿದ ಬೆಲೆ
• ಎಕರೆಗೆ 30 ಚೀಲ ಇಳುವರಿ
• ಭತ್ತ ಖರೀದಿ ಕೇಂದ್ರ ಆರಂಭಿಸಲು ಪಟ್ಟು

ದಸ್ತಗೀರ್ ಗುಡಿಹಾಳ
ಗಂಗಾವತಿ, ನ.9: ಹೆಚ್ಚಿದ ತೇವಾಂಶ, ಭತ್ತಕ್ಕೆ ಆವರಿಸಿದ ಕಾಂಡ ಕೊರೆಯುವ ಹುಳು, ಕಣೆ ಹುಳು, ಎಲೆಸುರುಳಿ ಕೀಟದ ಬಾಧೆ, ಕಾಡಿಗೆ ರೋಗ, ಕುಸಿದ ಇಳುವರಿ, ತಳಮಟ್ಟಕ್ಕೆ ಇಳಿದ ಭತ್ತದ ದರ…..
ಇವು ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಭತ್ತದ ಬೆಳೆದ ಅನ್ನದಾತರ ಸಮಸ್ಯೆ.
ಹೌದು, ಈ ವರ್ಷ ಉತ್ತಮ ಮಳೆಯಾಗಿದೆ. ತುಂಗಭದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಎರಡು ಬೆಳೆ ಬೆಳೆದು ಉತ್ತಮ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರ ಆಸೆ ನಿರಾಸೆಯಾಗಿದೆ.
ಭತ್ತಕ್ಕೆ ರೋಗ ಬಾಧೆ: ಆರಂಭದಲ್ಲಿ ಭತ್ತ ಉತ್ತಮವಾಗಿ ಬೆಳೆದಿತ್ತು. ಆದರೆ, ಅತಿ ಹೆಚ್ಚು ಮಳೆ, ಭತ್ತಕ್ಕೆ ಕಾಂಡ ಕೊರೆಯುವ ಹುಳು, ಕಣೆ ಹುಳು, ಎಲೆಸುರುಳಿ ಕೀಟದ ಬಾಧೆ, ಕಾಡಿಗೆ ರೋಗ ಸೇರಿ ನಾನಾ ರೋಗಗಳು ಆವರಿಸಿ, ರೈತರನ್ನು ಹೈರಾಣ ಮಾಡಿದೆ.
ಕುಸಿದ ಇಳುವರಿ: ತಾಲೂಕಿನಲ್ಲಿ ಭತ್ತ ಕಟಾವು ಈಗಾಗಲೇ ಆರಂಭವಾಗಿದೆ. ಆದರೆ, ಇಳುವರಿ ಕುಸಿದೆ. ಪ್ರತಿ ವರ್ಷ 1 ಎಕರೆಗೆ 45 ರಿಂದ 50 ಚೀಲ ಇಳುವರಿ ಬರುತ್ತಿತ್ತು. ಆದರೆ, ಈಗ ಎಕರೆಗೆ 30 ರಿಂದ 35 ಚೀಲ ಮಾತ್ರ ಇಳುವರಿ ಬಂದಿದ್ದು, ರೈತರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ.
ಅಧಿಕ ಖರ್ಚು: ಕೀಟನಾಶ, ಭತ್ತ ಕಟಾವು, ಕೂಲಿ ಸೇರಿ 1 ಎಕರೆಗೆ ಸುಮಾರು 35 ಸಾವಿರ ಖರ್ಚು ಬರುತ್ತದೆ. ಈ ವರ್ಷ ಇಳುವರಿ ಬಂದಿಲ್ಲ. ಅಲ್ಲದೇ ಬೆಲೆ ಸಹ ಕಡಿಮೆಯಾಗಿದೆ. ಅಲ್ಲದೆ, ಭತ್ತಕ್ಕೆ ಕುತ್ತಿಗೆ ರೋಗ ಆವರಿಸಿದ್ದರಿಂದ ತೂಕ ಸಹ ಬರುತ್ತಿಲ್ಲ. ಗದ್ದೆಗೆ ಖರ್ಚು ಮಾಡಿದ ಹಣ ಬಂದರೆ ಸಾಕು ಎನ್ನುವ ಸ್ಥಿತಿ ರೈತರದು.
ಭತ್ತಕ್ಕಿಲ್ಲ ಬೆಲೆ: ಕಳೆದ ವರ್ಷ 75 ಕೆ.ಜಿ ಭತ್ತಕ್ಕೆ 1500- 1600 ರೂ. ಬೆಲೆ ಸಿಕ್ಕಿತ್ತು. ಆದರೆ, ಸದ್ಯ 75 ಕೆ.ಜಿ. ಭತ್ತಕ್ಕೆ 950 ರಿಂದ 1 ಸಾವಿರ ಬೆಲೆ ಇದೆ. ಇನ್ನೂ ಬೆಳೆ ಸಂಪೂರ್ಣ ಕೊಯ್ಲು ಮುಗಿಯುವಷ್ಟರಲ್ಲಿ ದರ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಬೆನ್ನೂರು ಗ್ರಾಮದ ರೈತ ಮಲ್ಲಿಕಾರ್ಜುನ, ಗಂಗಾವತಿ ನೀಲಾ, ಹುಲಗಪ್ಪ ಸೇರಿ ಇತರರು ರೈತರು ಅಳಲು ತೋಡಿಕೊಂಡರು.
30 ಸಾವಿರ ಹೆಕ್ಟೇರ್: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಿದ್ದು, ಟಿಬಿಸಿಯಲ್ಲಿ 30 ಸಾವಿರ, ಪಂಪಸೈಟ್ ಸೇರಿ ಇತರೆ ಭಾಗದಲ್ಲಿ 14380 ಹೆಕ್ಟೇರನಲ್ಲಿ ಭತ್ತ ಬೆಳೆಯಲಾಗಿದೆ.
ಆರ್‍ಎನ್‍ಆರ್ ಭತ್ತಕ್ಕೆ ಬೇಡಿಕೆ: ಈ ಭಾಗದಲ್ಲಿ ಶೇ.80 ರಷ್ಟು ಸೋನಾ ಮಸೂರಿ ಬೆಳೆದಿದ್ದು, 2ನೇ ಸೋನಾ ಮಸೂರಿ,ಐಆರ್64 ಹಾಗೂ ಆರ್‍ಎನ್‍ಆರ್ ಭತ್ತ ಬೆಳೆಯಲಾಗಿದೆ. ಸದ್ಯ 75 ಕೆ.ಜಿ, ಸೋನಾ ಮಸೂರಿಗೆ (950ರಿಂದ 1000), 2ನೇ ಸೋನಾ ಮಸೂರಿ (950) ಹಾಗೂ ಆರ್‍ಎನ್ ಆರ್ (1350) ದರ ಇದೆ.


ವಾರದೊಳಗೆ ಭತ್ತ ಖರೀದಿ ಕೇಂದ್ರ ಆರಂಭ
ಸಂಜೆವಾಣಿ ಪ್ರತಿನಿಧಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ಭತ್ತಕ್ಕೆ ಕಣೆ ಹುಳು ಆವರಿಸದ ಹಿನ್ನೆಲೆ ಭತ್ತದ ಇಳುವರಿ ಕಡಿಮೆ ಆಗಿದೆ. ಅಲ್ಲದೆ, ಬೆಲೆ ಸಹ ತಳಮಟ್ಟಕ್ಕೆ ಕುಸಿದೆ. ಇದರಿಂದ ರೈತರಿಗೆ ಸಮಸ್ಯೆಯಾಗಿರುವುದು ನನ್ನ ಗಮನಕ್ಕೆ ಇದೆ.
ವಾರದೊಳಗೆ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರ ಆರಂಭಿಸಿ ರೈತರ ಸಮಸ್ಯೆಗೆ ಸ್ಪಂದಿಸಲಾಗುವುದು. ಅಲ್ಲದೇ, ಕಳೆದ ವರ್ಷ ಸರ್ಕಾರ ನೀಡಿದ್ದ 200 ರೂ. ಸಹ ರೈತರಿಗೆ ಕಲ್ಪಿಸಲಾಗುವುದು ಎಂದರು.


ಭತ್ತಕ್ಕೆ ಕುತ್ತಿಗೆ ರೋಗ ಬಂದಿದೆ. ಹಾಗಾಗಿ ಇಳುವರಿ ಕುಸಿದೆ. ಭತ್ತದ ಬೆಲೆ ಸಹ ತಳಮಟ್ಟಕ್ಕೆ ಕುಸಿದೆ. ಗದ್ದೆಗೆ ಮಾಡಿದ ಖರ್ಚು ಕಳೆದು ಸಾಲ ಆಗದಂತೆ ಆದರೆ ಸಾಕು.

  • ನೀಲಾ, ಗಂಗಾವತಿ, ಮಲ್ಲಿಕಾರ್ಜುನ ಬೆನ್ನೂರು, ರೈತ