ಕುಸಿದು ಬೀಳುವ ಹಂತದಲ್ಲಿ ಸೇತುವೆ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಕೆ.ಆರ್.ಪೇಟೆ. ನ.23:- ತಾಲ್ಲೂಕಿನ ಶೀಳನೆರೆ ಹೋಬಳಿಯ ಚನ್ನಾಪುರ ಗ್ರಾಮದ ಸೇತುವೆಯ ಕೆಳಭಾಗ ಅರ್ಧ ಕುಸಿದಿದ್ದು ಯಾವುದೇ ಕ್ಷಣದಲ್ಲಿಯಾದರೂ ಸೇತುವೆ ಕುಸಿದು ಬೀಳುವ ಹಂತದಲ್ಲಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಚನ್ನಾಪುರ ಗ್ರಾಮದ ಸೇತುವೆ ತೀರಾ ಹಳೆಯದಾಗಿದ್ದು ಬೇಲದಕೆರೆ, ಚಟ್ಟೇನಹಳ್ಳಿ, ಶಿವಪುರ, ಶೀಳನೆರೆ ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾಗಿದ್ದು, ಪ್ರತಿದಿನ ನೂರಾರು ದ್ವಿಚಕ್ರವಾಹನಗಳು, ಆಟೋ, ಕಾರು, ಟ್ರಾಕ್ಟರ್, ಬಸ್ಸು ಮತ್ತು ಎಳೆನೀರು ತುಂಬಿದ ವಾಹನಗಳು, ಕಬ್ಬು ತುಂಬಿದ ಲಾರಿಗಳು ಸಂಚರಿಸುತ್ತವೆ. ಸಾಧಾರಣ ಮಳೆಯಾದರೆ ಸಾಕು ಸೇತುವೆಯ ಮೇಲ್ಬಾಗದಲ್ಲಿ ಸಾರ್ವಜನಿಕರು ಸಂಚರಿಸಲು ಸಾಧ್ಯವಾಗದೇ ಪರದಾಡಬೇಕಾಗಿದೆ. ಈ ಬಗ್ಗೆ ಸಚಿವ ನಾರಾಯಣಗೌಡರಿಗೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ನೀಡಿದ್ದರೂ ಈ ಸೇತುವೆಯ ನಿರ್ಮಾಣದ ಬಗ್ಗೆ ಯಾವುದೇ ಕ್ರಮವಹಿಸದೇ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಕಳೆದ ಏಳೆಂಟು ತಿಂಗಳಿನಿಂದ ಧಾರಾಕಾರವಾಗಿ ಸುರಿದ ಮಳೆಗೆ ಸೇತುವೆಯ ಮೇಲೆ ನೀರು ಹರಿದ ಪರಿಣಾಮ ಸೇತುವೆ ಶಿಥಿಲಗೊಂಡು ಕಲ್ಲುಗಳು ಕುಸಿದಿವೆ. ಅರ್ಧ ರಸ್ತೆಯವರೆಗೆ ಯಾವುದೇ ಆಧಾರವಿಲ್ಲದೇ 5-7 ಅಡಿಯಷ್ಟು ಕಲ್ಲುಗಳು ಬಿದ್ದುಹೋಗಿರುವ ಪರಿಣಾಮ ಕೇವಲ ಮೇಲ್ಬಾಗದ 2-3 ಅಡಿಯ ಡಾಂಬಾರು ರಸ್ತೆಯ ಮೇಲೆ ವಾಹನಗಳು ಚಲಿಸುತ್ತಿವೆ. ಸೇತುವೆಯ ಕೆಳಬಾಗ ಕುಸಿದಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಕೂಡಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮುಂದೆ ಆಗಬಹುದಾದ ಪ್ರಾಣಹಾನಿಯನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.